Suddivijayanews11/5/2024
ವರದಿ: ಜಗಜೀವನ್ ರಾಂ
ಸುದ್ದಿವಿಜಯ, ಜಗಳೂರು-(ವಿಶೇಷ): ಈ ಗ್ರಾಮದಲ್ಲಿ ಸಮಾರು ತಿಂಗಳಿಂದ ರಾತ್ರಿ ಸಮಯದಲ್ಲಿ ನಿದ್ದೆ ಇಲ್ಲದೆ ಜನರು ಕಂಗಾಲಾಗಿದ್ದಾರೆ.
ಹೌದು, ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ದಲಿತ ಕೇರಿಯಿಂದ ಸುಮಾರು 400ಮೀ ಗಳ ಅಂತರದಲ್ಲಿ ವಿಂಡ್ ಫ್ಯಾನ್ ಅಳವಡಿಸಿದ್ದು,
ಇದರ ಬಾರಿ ಶಬ್ಧದಿಂದ ರಾತ್ರಿಯ ಸಮಯದಲ್ಲಿ ಮಕ್ಕಳಿಗೆ ಓದಲು ತೊಂದರೆಯಾಗುತ್ತಿದೆ, ದನಕರುಗಳು ಬೆದರುತ್ತಿವೆ.
ಅದಲ್ಲದೆ ಆ ಶಬ್ಧಕ್ಕೆ ವಯೋ ವೃದ್ಧರಿಗೆ ನಿದ್ದೆ ಬಾರದೇ ತಲೆ ನೋವು, ಆರೋಗ್ಯ ಸಂಬಂಧೀ ಸಮಸ್ಯೆಗಳು ಕಾಡಲಾರಂಭಿಸಿವೆ. ಎಂದು ತಮ್ಮ ನೋವನ್ನೂ ಹೊರ ಹಾಕಿದ್ದಾರೆ.
ವಿಂಡ್ ಫ್ಯಾನ್ ಅಳವಡಿಸುವಾಗ ಗ್ರಾಮಸ್ಥರು ತಡೆದರು ಸಹ ಕಂಪನಿಯವರು ಕ್ಯಾರೆ ಎನ್ನದೆ ತಮ್ಮ ಕಾಮಗಾರಿ ಮುಂದುವರಿಸಿದ್ದಾರೆ.
ಇತ್ತ ಗ್ರಾಮ ಪಂಚಾಯತಿ ಆಡಳಿತಕ್ಕೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಂತಿಷ್ಟೇ ದೂರ ಜನರ ವಾಸಸ್ಥಾನದಿಂದ ಫ್ಯಾನ್ ಅಳವಡಿಕೆ ಅಂತರ ಇರಬೇಕು ಎಂಬ ನಿಯಮ ಇದ್ದರೂ ಸಹ ಎಲ್ಲವನ್ನೂ ಗಾಳಿಗೆ ತೂರಲಾಗಿದೆ.
ಮುಖ್ಯಸ್ಥಿಕೆ ವಹಿಸಿದವರಿಗೆ ಹಣದ ರುಚಿ ತೋರಿಸಿ ತಮ್ಮ ಕೆಲಸವನ್ನು ಬೆಣ್ಣೆಯಲ್ಲಿ ಕೂದಲು ತೆಗೆದ ರೀತಿ ಅಚ್ಚುಕಟ್ಟಾಗಿ ಮುಗಿಸಿಕೊಂಡಿದ್ದಾರೆ.
ಕೇರಿಯ ಜನರಿಗೆ ಗ್ರಾಮ ಅಭಿವೃದ್ಧಿ, ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಪ್ರತಿ ಮನೆಗೂ ಇಂತಿಷ್ಟು ಹಣ ನೀಡುವುದಾಗಿ ನಂಬಿಸಿ ಈಗ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಪೂರ್ಣವಾದರೂ ವಿಂಡ್ ಫ್ಯಾನ್ ಕಂಪನಿಯವರು ತಿರುಗಿ ನೋಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರಿಗೂ ತಲೆ ನೋವು:
300 ಮೀಟರ್ ಅಂತರದಲ್ಲಿ 2ವಿಂಡ್ ಫ್ಯಾನ್ ಅಳವಡಿಸಿದ್ದು, ಅದರ ಸುತ್ತಮುತ್ತಲಿನ ಜಮೀನುಗಳಲ್ಲಿ ಕೆಲಸ ಮಾಡುವ ರೈತರಿಗೆ ಫ್ಯಾನ್ ಶಬ್ಧಕ್ಕೆ ತಲೆ ನೋವು ಬರುತ್ತದೆ ಎನ್ನುತ್ತಾರೆ.
ಇನ್ನು ವಿಂಡ್ ಫ್ಯಾನ್ ಅಳವಡಿಸಿದ ನಂತರ ಅದರ ಶಬ್ಧಕ್ಕೆ ಹಕ್ಕಿ ಪಕ್ಷಿಗಳು, ಕೋಳಿಗಳು ಹೆದರುತ್ತಿವೆ. ಆದ್ದರಿಂದ ಕೋಳಿ ಸಾಕಾಣಿಕೆ ಮಾಡುತ್ತಾ ಇದ್ದ ಫಾರಂ ಸಹ ಮುಚ್ಚಲಾಗಿದೆ.
ದುಡ್ಡಿದ್ದ್ದವರ ದರ್ಪದ ಮುಂದೆ ನಾವುಗಳು ಏನು ಮಾಡಲು ಸಾಧ್ಯ ಎಂದು ಅಸಹಾಯಕತೆಯಿಂದ ಅಲ್ಲಿನ ರೈತ ತಮ್ಮ ನೋವನ್ನೂ ಹಂಚಿಕೊಂಡಿದ್ದಾರೆ.
ವಿಂಡ್ ಫ್ಯಾನ್ ನಿಂದ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವ ದಲಿತ ಕೇರಿಗೆ ಕೊನೆ ಯಾವಾಗ? ಎಂಬ ಪ್ರಶ್ನೆ ನಮ್ಮ ಮುಂದೆ ಇದೆ.
ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸುತ್ತರೂ ಇಲ್ಲವೋ ಕಿಸೆ ಕಾಸಿಗೆ ಮೌನ ವಹಿಸುತ್ತಾರೋ ಎಂದು ಕಾದು ನೋಡಬೇಕಿದೆ.