suddivijaya5/6/2024
ಸುದ್ದಿವಿಜಯ, ಜಗಳೂರು: ಹವಾಮಾನ ಬದಲಾವಣೆಯು ಜನರ ಜೀವನ ಮತ್ತು ಆರೋಗ್ಯದ ಮೇಲೆ ವಿವಿಧ ರೀತಿಯ ಪರಿಣಾಮ ಬೀರುತ್ತಿದೆ.
ಸುರಕ್ಷಿತ ಶುದ್ಧ ಕುಡಿಯುವ ನೀರು, ಗಾಳಿ, ಗುಣಮಟ್ಟದ ಆಹಾರ ಬೇಕಾದರೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು ಇಲ್ಲವಾದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶ ಚೇತನ್ ವಿಷಾಧಿಸಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಬುಧವಾರ ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆ, ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನವ ಸೇರಿದಂತೆ ಪ್ರಾಣಿ, ಪಕ್ಷಿ, ಜೀವ ಸಂಕುಲಗಳು ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ. ಇದರೆ ಇತ್ತಿಚಿನ ದಿನಗಳಲ್ಲಿ ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ವಕೀಲರ ಸಂಘದ ತಾಲೂಧ್ಯಕ್ಷ ಮರೇನಹಳ್ಳಿ ಬಸವರಾಜ್ ಮಾತನಾಡಿ, ಭೂಮಿಯ ಮೇಲೆ ಪ್ರಕೃತಿ ಅನೇಕ ಬಾರಿ ತನ್ನ ರೌದ್ರವತಾರವನ್ನು ತೋರಿಸಿದೆ. ಆದರೂ ಮನುಷ್ಯ ಅರ್ಥ ಮಾಡಿಕೊಳ್ಳದೇ ಮನಸ್ಸೊ ಇಚ್ಚೆ ಜೀವಿಸುತ್ತಿದ್ದಾನೆ ಎಂದರು.
ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಸಹಕಾರಿಯಾಗಿದೆ ಎಂದರು.
ಇದೇ ವೇಳೆ ಸಾರ್ವಜನಿಕರು, ವಕೀಲರಿಗೆ 50ಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಾದೇಶಿಕ ವಲಯಾರಣ್ಯಾಧಿಕಾರಿ ಬಿ.ಟಿ.ಶ್ರೀನಿವಾಸ್, ಸಾಮಾಜಿಕ ವಲಯಾರಣ್ಯಾಧಿಕಾರಿ ಮಹೇಶ್ವರಪ್ಪ, ಸರಕಾರಿ ವಕೀಲ ಮಂಜುನಾಥ್, ವಕೀಲ ಸಂಘದ ಉಪಾಧ್ಯಕ್ಷ ಬಿ.ಎಸ್ ಪ್ರಕಾಶ್,
ವಕೀಲರಾದ ವಂಶಿ ಮೋಹನ್, ಆರ್. ಓಬಳೇಶ್, ಕೆ.ವಿ ರುದ್ರೇಶ್, ಎ.ಟಿ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ನಾಗೇಶ್, ಭೂಪತಿ ಸೇರಿದಂತೆ ಮತ್ತಿತರರಿದ್ದರು.