ಸುದ್ದಿವಿಜಯ, ಜಗಳೂರು: ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ದೇಶ ಎಂದರೆ ಭಾರತ. ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಬಡತನ, ನಿರುದ್ಯೋಗ, ಹಸಿವು ಮುಂತಾದ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ವಿಶ್ವ ಜನಸಂಖ್ಯಾ ದಿನದ ಉದ್ದೇಶವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ 134 ಕೋಟಿಗೂ ಅಧಿಕ ಜನರು ವಾಸಿಸುತ್ತಿದ್ದಾರೆ ಆದರೆ ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳಿಲ್ಲ. ಅನೇಕ ಜನರು ಇನ್ನೂ ಸಹಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲೈಂಗಿಕ ದೃಷ್ಟಿಕೋನ, ಲಿಂಗ, ಜನಾಂಗೀಯತೆ, ವರ್ಗ, ಧರ್ಮ, ಅಂಗವೈಕಲ್ಯ ಮತ್ತು ದೇಶದ ಮೂಲದ ಆಧಾರದ ಮೇಲೆ ಕಿರುಕುಳ, ತಾರತಮ್ಯ ಮತ್ತು ಹಿಂಸೆ ಹೀಗೆ ಹಲವಾರು ಸಮಸ್ಯೆಗಳಿಗೆ ಗುರಿಯಾಗಿದ್ದಾರೆ.
ನಾವು ಜನಸಂಖ್ಯೆಯನ್ನು ಗುಣಿಸುವುದನ್ನು ಮುಂದುವರಿಸಿದಂತೆ, ಅಧಿಕ ಜನಸಂಖ್ಯೆಯ ಸಮಸ್ಯೆ ಎಂದಿಗಿಂತಲೂ ಹೆಚ್ಚು ಗಂಭೀರವಾಗಿರುತ್ತದೆ. ಉದಯೋನ್ಮುಖ ರಾಷ್ಟ್ರಗಳು ಈಗ ಲಿಂಗ ಅಸಮಾನತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಸಮಸ್ಯೆಗಳ ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ ಎಂದರು.
ಸಿಡಿಪಿಓ ಬಿರೇಂದ್ರಕುಮಾರ್ ಮಾತನಾಡಿ, ಬಾಲ್ಯವಿವಾಹಕ್ಕೆ ಹೆಚ್ಚು ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದು.ಇದಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಇಲಾಖೆಯ ಜತೆ ಸಹಕರಿಸಬೇಕು. ಪ್ರತಿ ಹೆಣ್ಣು ಮಕ್ಕಳಿಗೂ ಶಿಕ್ಷಣ ಸಿಗಬೇಕು, ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು ಆಗ ಮಾತ್ರ ಜನಸಂಖ್ಯೆ ಇಳಿಮುಖವಾಗಲು ಸಾಧ್ಯವಿದೆ ಎಂದರು.
ಇದೇ ವೇಳೆ ಅಧಿಕಾರಿಗಳು ಜನಸಂಖ್ಯಾ ನಿಯಂತ್ರಣದ ಭಿತ್ತಿ ಚಿತ್ರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಮಂಜಾನಂದ, ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಇಸಿಓ ಬಸವರಾಜ್, ಆರೋಗ್ಯ ಇಲಾಖೆ ಮೇಲ್ವಿಚಾರಕರಾದ ಪರಶುರಾಮ, ಮಂಜಪ್ಪ, ಸುಶೀಲಮ್ಮ, ರೇಷ್ಮಾ, ಆಶಾ,ಎಚ್.ರೂಪ, ಭಾರತಿ ಸೇರಿದಂತೆ ನೂರಾರು ಆಶಾಕಾರ್ಯಕರ್ತೆಯರು ಇದ್ದರು.