ಸುದ್ದಿವಿಜಯ,ಜಗಳೂರು:ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಪರ ಕಾಂಗ್ರೆಸ್ ಸಿಎಲ್ ಪಿ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಏ.30 ರಂದು ಭಾನುವಾರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮತಯಾಚನೆ ಮಾಡಲಿದ್ದಾರೆ ಎಂದು ಅಭ್ಯರ್ಥಿ ಬಿ.ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪ್ರಚಾರದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು 11 ಗಂಟೆಗೆ ಪಟ್ಟಣದ ಬಯಲು ರಂಗ ಮಂದಿರದಲ್ಲಿ 25 ಸಾವಿರಕ್ಕೂ ಹೆಚ್ಚು ಜನ ಕಾರ್ಯಕರ್ತರು, ಅಭಿಮಾನಿಗಳು, ಭಾಗವಹಿಸಲಿದ್ದಾರೆ.
ಈ ವೇಳೆ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಮೀರ್ ಅಹ್ಮದ್ ಖಾನ್, ಎಚ್.ಆಂಜನೇಯ ಸೇರಿದಂತೆ ದೊಡ್ಡ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನನಗೆ ಬಿಜೆಪಿ ಅಭ್ಯರ್ಥಿ ಪ್ರತಿಸ್ಪರ್ಧಿ:
ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಲೆಯಿದೆ. ನನಗೆ ಬಿಜೆಪಿ ಅಭ್ಯರ್ಥಿ ಎದುರಾಳಿಯೇ ವಿನಃ ಪಕ್ಷೇತರ ಅಭ್ಯರ್ಥಿ ಅಲ್ಲ. ಬಂಡಾಯ ಅಭ್ಯರ್ಥಿಗೆ ಪಕ್ಷ ಎರಡು ಬಾರಿ ಟಿಕೆಟ್ ಕೊಟ್ಟು ಒಮ್ಮೆ ಶಾಸಕರನ್ನಾಗಿ ಮಾಡಿದೆ. ಸ್ವಾರ್ಥಕೊಸ್ಕರ ಪಕ್ಷದ ವಿರೋಧಿ ಕಾರ್ಯ ಯಶಸ್ವಿಯಾಗುವುದಿಲ್ಲ.
ಅಧಿಕಾರದ ಆಸೆಗಾಗಿ ಅವರು ತಾಯಿ ಸ್ಥಾನದಲ್ಲಿರುವ ಪಕ್ಷಕ್ಕೆ ದ್ರೋಹ ಮಾಡಿ ಹೊರ ಹೋಗಿದ್ದಾರೆ. ಮೇ.13ರ ಫಲಿತಾಂಶ ಕಾಂಗ್ರೆಸ್ ಪಕ್ಷದ ದಿಕ್ಸೂಚಿ ಎಂದರು.
ಈ ಬಾರಿ ಜಗಳೂರು ಕ್ಷೇತ್ರಸಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ನಿಶ್ಚಿತ. ಕಾಂಗ್ರೆಸ್ ಅಂದರೆ ದೇಶದ ಶಕ್ತಿ.
ರಾಜ್ಯದಲ್ಲಿ 130 ಸೀಟ್ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಎಲ್ಲ ಸಮುದಾಯದವರು ಪಕ್ಷದ ಪರ ನಿಂತಿದ್ದಾರೆ.
ಯಾದವ ಸಮುದಾಯದ ಮುಖಂಡರು, ದಲಿತರು ಕಾಂಗ್ರೆಸ್ ಪಕ್ಷದ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಇಬ್ಬರಿಗೂ ಕ್ಷೇತ್ರದ ಜನ ಅವಕಾಶ ಕೊಟ್ಟಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆಲ್ಲಿಸಲು ಪಣತೊಟ್ಟಿದ್ದಾರೆ ಎಂದು ಹೇಳಿದರು.
ರಾಜಕೀಯ ಇಚ್ಛಾಶಕ್ತಿ ರಂಗ ಪ್ರವೇಶ
ನಾನು ಜೆಡಿಎಸ್ ಪಕ್ಷದಿಂದ ರಾಜಕೀಯಕ್ಕೆ ಬಂದವನು. ಸಮಾಜ ಸೇವಕನಾಗಿ ಬೆಳೆದು ಬಂದಿದ್ದೇನೆ. ಕಾಲೇಜಿನಲ್ಲಿ ಸೇವಕನಾಗಿ ವೃತ್ತಿ ಆರಂಭಿಸಿ ರಾಜಕೀಯ ಇಚ್ಛಾಶಕ್ತಿ ಹೊಂದಿ ರಾಜಕೀಯ ರಂಗ ಪ್ರವೇಶಿಸಿದ್ದೇನೆ. ಏಕಾ ಏಕಿ ರಾಜಕೀಯ ರಂಗ ಪ್ರವೇಶ ಮಾಡಿದವನಲ್ಲ. ಈಬಾರಿ ಜನ ತೀರ್ಮಾನ ಮಾಡಿದ್ದಾರೆ. ಡಬಲ್ ಎಂಜಿನ್ ಸರಕಾರ ಸೋಲಿಸಲಿದ್ದಾರೆ ಎಂದು ದೇವೇಂದ್ರಪ್ಪ ಹೇಳಿದರು.
ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಕ್ಷೇತ್ರದಲ್ಲಿ ಬಂಡಾಯದ ಬಿಸಿಯಿಲ್ಲ.
ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ. ಪಕ್ಷೇತರ ಅಭ್ಯರ್ಥಿ ರಾಜೇಶ್ ಅವರು ಸಂಘ ಸಂಸ್ಥೆಗಳ ಹಿನ್ನೆಲೆಯಿಂದ ಬಂದವರಲ್ಲ, ಪಕ್ಷ ಬಾವುಟ ಹಿಡಿದು ಪಕ್ಷ ಕಟ್ಟಲಿಲ್ಲ. ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸ್ವಾತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಟಿಕೆಟ್ ಸಿಗಲಿಲ್ಲ. ಹಾಗಂತ ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದು ಪರೋಕ್ಷವಾಗಿ ಪಕ್ಷೇತರ ಅಭ್ಯರ್ಥಿ ವಿರುದ್ಧ ಹರಿಹಾಯ್ದರು.
ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಮಾಜಿ ಶಾಸಕ ಅಶ್ವತ್ಥ ರೆಡ್ಡಿ ಪುತ್ರ ಶ್ಯಾಮ್ ರೆಡ್ಡಿ, ಮಾಳಮ್ಮನಹಳ್ಳಿ ವೆಂಕಟೇಶ್, ರಂಗನಾಥ ರೆಡ್ಡಿ, ಮಹಮ್ಮದ್ ಗೌಸ್, ಗೋಡೆ ಪ್ರಕಾಶ್ ಸೇರಿದಂತೆ ಅನೇರು ಇದ್ದರು.