ಶಾಸಕರೇ ನೀವು ಎಷ್ಟು ಹಳ್ಳಿ ಸುತ್ತಿ ಪಕ್ಷ ಕಟ್ಟಿದ್ದೀರಿ?: ಮಾಜಿ ಶಾಸಕ H.P.ರಾಜೇಶ್ ಪ್ರಶ್ನೆ!

Suddivijaya
Suddivijaya February 12, 2024
Updated 2024/02/12 at 11:03 AM

ಸುದ್ದಿವಿಜಯ, ಜಗಳೂರು: ನಾನು ಮತ್ತು ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು 10 ವರ್ಷಗಳ ಕಾಲ ಸಂಘಟನೆ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ.

ಪ್ರತಿ ಹಳ್ಳಿ ಹಳ್ಳಿಗಳನ್ನು ಸುತ್ತಿ ಪಕ್ಷ ಕಟ್ಟಲು ಶ್ರಮಿಸಿದ್ದೇವೆ. ಶಾಸಕನಾಗಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನೀವು ಪಕ್ಷ ಸೇರಿದ ಮೇಲೆ ಮತ್ತು ಶಾಸಕರಾದ ನಂತರ ಎಷ್ಟು ಹಳ್ಳಿ ಸುತ್ತಿ ಪಕ್ಷ ಸಂಘಟಿಸಿದ್ದೀರಿ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಪ್ರಶ್ನಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ದೇವೇಂದ್ರಪ್ಪ ‘ತೆಂಗಿನ ಮರ’ದ (ಸ್ವಾಭಿಮಾನಿ ಬಣ) ಕಾರ್ಯಕರ್ತರು ಬರಬೇಡಿ ಎನ್ನುತ್ತಾರಂತೆ.

ನಾವು ಪಕ್ಷ ಕಟ್ಟಿ ಸಂಘಟನೆ ಮಾಡಿದ ಕಾರಣಕ್ಕೆ ನೀವು ಪಕ್ಷ ಸೇರ್ಪಡೆಯಾಗಿ ಶಾಸಕರಾಗಿದ್ದು ಮರೆಯಬೇಡಿ. ಈಗ ತೆಂಗಿನ ಮರ ಬಾಡಿರಬಹುದು. ಮುಂದೊಂದು ದಿನ ತೆಂಗಿನ ಮರ ಫಲ ಕೊಟ್ಟೇ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು. ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಮನಾಗಿ ಹೋರಾಟ ಮಾಡಿದ್ದೇವೆ. ತಾಂತ್ರಿಕವಾಗಿ ನಾವು ಸೋಲು ಅನುಭವಿಸಿರಬಹುದು. ನಾವೆಲ್ಲಾ ಕಾಂಗ್ರೆಸ್ ಪಕ್ಷದಲ್ಲೇ ಇದ್ದವರು.

ನಾನು ಶಾಸಕನಾಗಿದ್ದಾಗ ಪಪಂ, ತಾಪಂ ಸೇರದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಆದರೂ ಪಕ್ಷದ ಮುಖಂಡರು ನನಗೆ ಟಿಕೆಟ್ ತಪ್ಪಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಐದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನಾಲ್ಕು ಬಾರಿ ಸೋತಿದ್ದೇನೆ. ಅತೀಯಾದ ಆತ್ಮವಿಶ್ವಾಸವೇ ಮುಳುವಾಯಿತೇನೋ ಅನ್ನಿಸಿತು.

ಅನೇಕ ಮುಗ್ದ ಮತದಾರರಿಗೆ ನೋಟಾದಿಂದ ಎಡವಟ್ಟಾಯಿತು. ಚುನಾವಣೆಯಲ್ಲಿ ಸೋತಿರಬಹುದು ಆದರೆ ನಾನು ವಿಚಲಿತನಾಗಿಲ್ಲ. ನನ್ನ ಪರ ಸ್ವಾಭಿಮಾನಿಗಳ ದೊಡ್ಡ ಪಡೆಯಿದೆ.ಚುನಾವಣೆಯಲ್ಲಿ ಶ್ರಮಿಸಿದ ಎಲ್ಲರಿಗೂ ಚಿರಋಣಿ. ಸೋಲನ್ನು ಯಾರು ಸ್ವೀಕರಿಸುತ್ತಾರೋ ಅವರು ಮುಂದೊಂದು ದಿನ ಗೆಲುವಿಗೆ ಅರ್ಹರಾಗುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಟಿಕೆಟ್ ಕೊಡಿ ಎಂದು ಕೇಳಿದಾಗ ಈಬಾರಿ ಬೇಡ ಮುಂದೆ ನೋಡೋಣ ಎಂದರು. ಟಿಕೆಟ್ ಕೊಟ್ಟಿದ್ದರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆ.

ಇದು ನಿಜಕ್ಕೂ ವಿಪರ್ಯಾ. ಚುನಾವಣೆ ಮುನ್ನ ಅನೇಕ ಹಳ್ಳಿಗಳನ್ನು ಸುತ್ತಿ ಗ್ಯಾರಂಟಿ ಕಾರ್ಡ್ ಹಂಚಿದೆವು. ಹೀಗಾಗಿ ಮುಗ್ದ ಮತದಾರರು ನಾನು ಇನ್ನೂ ಕಾಂಗ್ರೆಸ್‍ನಲ್ಲೇ ಇದ್ದೇನೆ ಎಂದು ಪಕ್ಷದ ಗುರುತಿಗೆ ವೋಟ್ ಹಾಕಿದರು.ಗ್ಯಾರಂಟಿ ಕಾರ್ಡ್ ಹಂಚದೇ ತೆರದ ವಾಹನದಲ್ಲಿ ಪ್ರಚಾರ ಮಾಡಿದ ಈಗಿನ ಶಾಸಕ ದೇವೇಂದ್ರಪ್ಪ ಪಕ್ಷಕ್ಕಾಗಿ ದುಡಿಯಲಿಲ್ಲ. ಈಗ ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಆತುರ ಪಡಬೇಡಿ ಎಂದು ನನಗೆ ಸಮಾಧಾನ ಮಾಡುತ್ತಿದ್ದಾರೆ.

ಸ್ವಾಭಿಮಾನಿಗಳಿಗೆ ರಾಜಕೀಯ ಅಸ್ತಿತ್ವ ಬೇಕು ಹೀಗಾಗಿ ಕಾರ್ಯಕರ್ತರು ಬೆಂಬಲಿಗರು ಏನು ನಿರ್ಧಾರ, ತೀರ್ಮಾನ ಮಾಡುತ್ತೀರೋ ಅದಕ್ಕೆ ಬದ್ಧವಾಗಿರುತ್ತೇನೆ ಎಂದರು.

ರಾಜೇಶ್ ಬಿಜೆಪಿಗೆ ಸೇರಬೇಕು…

ಸಭೆಗೆ ತಾಲೂಕಿನ 22 ಗ್ರಾಪಂ ಮತ್ತು ಅರಸೀಕೆರೆ ಭಾಗದ 7 ಗ್ರಾಪಂ ನಿಂದ ಸಾವಿರಕ್ಕೂ ಹೆಚ್ಚು ಸ್ವಾಭಿಮಾನಿ ಕಾರ್ಯಕರ್ತರು ಆಗಮಿಸಿದ್ದರು. ಅದರಲ್ಲಿ ಜಗಳೂರು ಪಟ್ಟಣದ ತಿಪ್ಪೇಸ್ವಾಮಿ, ವಕೀಲ ಕರಿಬಸಪ್ಪ, ಮುಸ್ಟೂರು ತಿಪ್ಪೇಸ್ವಾಮಿ, ಕೆಳಗೋಟೆ ಪ್ರಕಾಶ್ ಸೇರಿದಂತೆ ಶೇ.80 ರಷ್ಟು ರಾಜೇಶ್ ಅಭಿಮಾನಿಗಳು ನೀವು ಬಿಜೆಪಿ ಸೇರ್ಪಡೆಯಾಗಬೇಕು.

ಮೊದಲು ಬಿಜೆಪಿಯಿಂದಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರಿಂದ ಮತ್ತೆ ಅದೇ ಪಕ್ಷಕ್ಕೆ ಸೇರಿ. ಹಾಗಾದರೆ ಮಾತ್ರ ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಿಮ್ಮನ್ನು ಹೀನಾಯವಾಗಿ ನಡೆಸಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೋದರೆ ನಾವು ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದರು.

ಸಭೆ ಬರಖಾಸ್ತು ಗೊಳ್ಳುವ ಮುನ್ನವೇ ‘ರಾಜೇಶ್ ಬಿಜೆಪಿಗೆ ಸೇರಬೇಕು… ಬಿಜೆಪಿಗೆ ಸೇರಬೇಕು’ ಎಂದು ಒಕ್ಕೋರಲಿನಿಂದ ಕಾರ್ಯಕರ್ತರು, ಅಭಿಮಾನಿಗಳು ಜೈಯಕಾರ ಕೂಗಿದರು.

ಯಾವುದೇ ಪಕ್ಷಕ್ಕೆ ಸೇರಿದರೂ ನಾವು ನಿಮ್ಮನ್ನು ಬೆಂಬಲಿಸುತ್ತೇವೆ!

ಬೆಂಬಲಿಗರಾದ ಎನ್.ಎಸ್.ರಾಜು, ಎಲ್.ಬಿ.ಬೈರೇಶ್, ಮಾಹಂತೇಶ್ ನಾಯ್ಕ್, ಪುರುಷೋತ್ತಮ, ಮೊಬೈಲ್ ಮಂಜುನಾಥ್, ಗಡಿಗುಡಾಳ್ ಸುರೇಶ್, ತಿಪ್ಪೇಸ್ವಾಮಿಗೌಡ, ಯಶವಂತಗೌಡ್ರು ಸೇರಿದಂತೆ ಅನೇಕರು ಮಾತನಾಡಿ,

ರಾಜೇಶ್ ಅವರನ್ನು ಯಾವ ಪಕ್ಷ ಗೌರವಿಸುತ್ತದೋ ಮತ್ತು ಮುಂದಿನ ಚುಣಾವಣೆಗಳಲ್ಲಿ ಯಾವ ಪಕ್ಷ ಟಿಕೆಟ್ ಖಾತ್ರಿ ಮಾಡುತ್ತದೋ ಅಂತಹ ಪಕ್ಷಕ್ಕೆ ನೀವು ಸೇರ್ಪಡೆಯಾಗಿ. ನೀವು ಯಾವುದೇ ಪಕ್ಷಕ್ಕೆ ಸೇರಿದರೂ ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಿಮಗಾಗಿ ದುಡಿಯುತ್ತೇವೆ ಎಂದು ಭರವಸೆ ನೀಡಿದರು.

ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ

ಕಾರ್ಯಕ್ರಮ ಕೊನೆಯಲ್ಲಿ ಮತ್ತೊಮ್ಮೆ ಮಾತನಾಡಿದ ಎಚ್.ಪಿ.ರಾಜೇಶ್, ಈ ಸಭೆ ಕೇವಲ ಅಭಿಪ್ರಾಯ ಸಂಗ್ರಹ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಸಲಹಾ ಮಂಡಳಿ ತೀರ್ಮಾನಕ್ಕೆ ಬದ್ಧನಾಗಿ ಇರುತ್ತೇನೆ.

ಇನ್ನೂ ಕಾಲಾವಕಾಶವಿದೆ. ನಿಮ್ಮ ಭಾವನೆಗಳಿಗೆ ಬದ್ಧನಾಗಿ ಇರುತ್ತೇನೆ. ಎರಡೂ ಪಕ್ಷಗಳಿಂದ ನನಗೆ ಅನ್ಯಾಯವಾಗಿದೆ. ಯಾವ ಪಕ್ಷ ನಮಗೆ ಗೌರವ ಕೊಡುತ್ತದೋ ಆ ಪಕ್ಷ ಸೇರ್ಪಡೆಯಾಗಲು ನಿಮ್ಮೆಲ್ಲರ ಮಾರ್ಗದರ್ಶನದಂತೆ ತೀರ್ಮಾನ ಮಾಡುತ್ತೇನೆ.

ಇದು ಸಮಾಲೋಚನ ಸಭೆ ಅಷ್ಟೇ. ಮುಂದಿನ ದಿನಗಳಲ್ಲಿ ಬೆಂಬಲಿಗರ ಜೊತೆ ಮತ್ತೊಮ್ಮೆ ಚರ್ಚಿಸಿ ಯಾವ ಪಕ್ಷ ಸೇರ್ಪಡೆಯಾಗಬೇಕು ಎಂದು ನಿರ್ಧಾರ ಮಾಡುತ್ತೇನೆ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!