ಸುದ್ದಿವಿಜಯ, ಜಗಳೂರು: ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಇಂದು ಬಿದರಕೆರೆಯ ತಮ್ಮ ತೋಟದ ಮನೆಯಲ್ಲಿ ಬೆಂಬಲಿಗರು, ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು, ಹಿತೈಶಿಗಳ ದೊಡ್ಡ ಸಭೆಯನ್ನೇ ಕರೆದಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಅಷ್ಟೇ ಅಲ್ಲ, ಕ್ಷೇತ್ರದಲ್ಲಿ ರಾಜಕೀಯ ವಿದ್ಯಮಾನಗಳ ಸ್ಥಾನಪಟ್ಟಲ್ಲಟದ ಮುನ್ಸೂಚನೆಯಾ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.
ಈಗಾಗಲೇ ಕ್ಷೇತ್ರದಲ್ಲಿರುವ ಪುಣ್ಯಕ್ಷೇತ್ರಗಳ ಟೆಂಪಲ್ ರನ್ ಮುಗಿಸಿರುವ ಅವರು, ಬೆಂಬಲಿಗರೊಂದಿಗೆ ಸುದೀರ್ಘ ಚರ್ಚೆ ನಡೆಸಲು ಶನಿವಾರ 11 ಗಂಟೆಗೆ ಸಭೆ ಕರೆದಿದ್ದಾರೆ.
ಟಿಕೆಟ್ ಘೋಷಣೆ ವಿಳಂಬದಿಂದ ಕಾಂಗ್ರೆಸ್ ನಾಯಕರಿಗೆ ಧರ್ಮಸಂಕಟ:
ರಾಜ್ಯ ರಾಜಕೀಯದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಜಂಪಿಂಗ್ ಸ್ಟಾರ್ಸ್, ರೆಬಲ್ ಸ್ಟಾರ್ಸ್, ನ್ಯೂಟ್ರಲ್ ಸ್ಟಾರ್ಸ್‍ಗಳ ದೊಡ್ಡ ಪಟ್ಟಿ ದಿನೇ ದನೇ ಹೆಚ್ಚುತ್ತಿದೆ.
ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದ ಅನೇಕರು ಬಿಜೆಪಿಗೆ ಹೋಗುತ್ತಿದ್ದರೆ, ಬಿಜೆಪಿಯಲ್ಲಿ ಟಿಕೆಟ್ ಸಿಗದ ಅನೇಕರು ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಕಡೆ ಮುಖ ಮಾಡುತ್ತಿದ್ದಾರೆ.
ದೊಡ್ಡ ದೊಡ್ಡ ನಾಯಕರು ಟಿಕೆಟ್ ಕೈತಪ್ಪಿದ್ದರಿಂದ ಅವರು ಸಹ ಬೆಂಬಲಿಗರು, ಹಿತೈಶಿಗಳು, ಆಪ್ತರ ಸಭೆ ಕರೆದು ತೀರ್ಮಾನಿಸಿದ ನಂತರ ಏನು ಮಾಡಬಹುದು ಎಂದು ಕೂಲಂಕಷವಾಗಿ ಚರ್ಚಿಸಿ ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಅದರಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗೊಂದಲ ಮುಂದುವರೆದಿದೆ.
ಕಾಂಗ್ರೆಸ್ ಬಿಡುಗಡೆ ಮಾಡಿದ ಎರಡೂ ಪಟ್ಟಿಗಳಲ್ಲಿ ಜಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾರು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.ಪಕ್ಷವೇ ತಾಯಿ ಎಂದು ನಂಬಿರುವ ಮತ್ತು ರಾಜೇಶ್ ಅಭಿಮಾನಿಗಳು ಕಂಡ ಕಂಡನಲ್ಲಿ ಗುಸು ಗುಸು ಮಾತುಗಳು ಆರಂಭಿಸಿದ್ದಾರೆ.
ಇಷ್ಟೊತ್ತಿಗೆ ಟಿಕೆಟ್ ಅನೌನ್ಸ್ ಮಾಡಿದ್ದರೆ ಕ್ಷೇತ್ರದಾದ್ಯಂತ ಅಬ್ಬರದ ಪ್ರಚಾರ ಶುರುಮಾಡಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಹೈಕಮಾಂಡ್ ಮಾತ್ರ ಮೂರನೇ ಪಟ್ಟಿಯನ್ನು ಬಿಡದೇ ಸಸ್ಪೆನ್ಸ್ ಕಾಪಾಡಿರೋದು ಕಾಂಗ್ರೆಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಕಾಂಗ್ರೆಸ್ ಟಿಕೆಟ್ ಯಾರಿಗೆ?
ಕ್ಷೇತ್ರದಲ್ಲಿ ಪ್ರಬಲವಾಗಿ ಕೇಳಿಬರುತ್ತಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್, ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮತ್ತು ಕೆ.ಪಿ.ಪಾಲಯ್ಯ ಈ ಮೂರು ಹೆಸರುಗಳಲ್ಲಿ ಎರಡು ಹೆಸರುಗಳ ಪಟ್ಟಿಯನ್ನು ಕೇಂದ್ರದ ವರಿಷ್ಠರ ಮುಂದಿವೆ. ಆದರೆ ಆ ಎರಡು ಹೆಸರುಗಳು ಯಾವುವು ಎಂಬುದು ಗುಟ್ಟು ಬಹಿರಂಗವಾಗಿಲ್ಲ.
ಇಂದು ಪಟ್ಟಿ ಬಿಡುಗಡೆಯಾಗುತ್ತೆ. ನಾಳೆ ಬಿಡುಗಡೆಯಾಗುತ್ತದೆ. ಕ್ಷಣಗಣನೆ ಎಂಬ ಕುತೂಹಲಕ್ಕೆ ಹೈ ಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ಕೊಡದೇ ಇರುವ ಕಾರಣ ಸಹಜವಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಂದು ರೀತಿಯ ಚಡಪಡಿಕೆ ಶುರುವಾಗಿದೆ.
ಹೀಗಾಗಿ ರಾಜೇಶ್ ಅವರು ಕರೆದಿರುವ ಸಭೆಯಲ್ಲಿ ಸುಧೀರ್ಘ ಚರ್ಚೆಯಲ್ಲಿ, ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ.