ಸುದ್ದಿವಿಜಯ, ಜಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದ ಮಾಜಿ ಶಾಸಕ ಎಚ್.ಪಿ.ರಾಜೇಶ್ ಶನಿವಾರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ದ ಎಚ್.ಪಿ.ರಾಜೇಶ್ ಅವರಿಗೆ ಪಕ್ಷದ ವರಿಷ್ಠರು ಟಿಕೆಟ್ ನಿರಾಕರಿಸಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು.
ಇತ್ತೀಚೆಗೆ ವಾಲ್ಮೀಕಿ ಭವನದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಶೇ.90ರಷ್ಟು ಬೆಂಬಲಿಗರು ಬಿಜೆಪಿ ಸೇರ್ಪಡೆಯಾಗಬೇಕು. ಯಾವುದೇ ಕಾರಣಕ್ಕೂ ತಾವು ಕಾಂಗ್ರೆಸ್ ಪಕ್ಷಕ್ಕೆ ಹೋಗಬಾರದು.ಒಂದು ವೇಳೆ ಹೋದರೆ ನಾವು ನಿಮ್ಮನ್ನು ಬೆಂಬಲಿಸುವುದಿಲ್ಲ ಎಂದು ಒತ್ತಾಯ ಮಾಡಿದ್ದರು. ಎಲ್ಲರ ಅಭಿಮತ ಕ್ರೂಢೀಕರಿಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇನೆ ಎಂದು ತಿಳಿಸಿದ್ದರು. ಹೀಗಾಗಿ ಬಿಜೆಪಿ ವರಿಷ್ಠರ ಕರೆಯ ಮೇರೆಗೆ ಅವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ರಾಷ್ಟ್ರೀಯ ಪಕ್ಷ ಸೇರ್ಪಡೆ ಅನಿವಾರ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಎಂಎಲ್‍ಸಿ ರವಿಕುಮಾರ್ ಸೇರಿದಂತೆ ಅನೇಕ ಹಿರಿಯ ನಾಯಕರು ಪಕ್ಷ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಹೀಗಾಗಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿರುವ ಬಗ್ಗೆ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾಹಿತಿ ನೀಡಿದರು.
ಪ್ರಥಮ ಬಾರಿಗೆ ಎಚ್.ಪಿ.ರಾಜೇಶ್ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಬಿಜೆಪಿಯಿಂದ. ನಂತರ 2013ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಐದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಒಮ್ಮೆ ಮಾತ್ರ ಗೆಲುವು ಸಾಧಿಸಿದ್ದಾರೆ.
ತಮ್ಮ ರಾಜಕೀಯ ಭವಿಷ್ಯ ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕರ್ತರ, ಅಭಿಮಾನಿಗಳ ಸಲಹೆ ಮೇರೆಗೆ ಸಾವಿರಾರು ಬೆಂಬಲಿಗರೊಂದಿಗೆ ಶನಿವಾರ ಬಿಜೆಪಿ ಸೇರಲಿದ್ದಾರೆ.