ಸುದ್ದಿವಿಜಯ, ಜಗಳೂರು: ಏ.19 ರಂದು ಬುಧವಾರ ಮಾಜಿ ಶಾಸಕ ಎಚ್.ಪಿ.ರಾಜೇಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಶನಿವಾರ ಘೋಷಣೆ ಮಾಡಿದರು.
ತಾಲೂಕಿನ ಬಿದರಕೆರೆ ಗ್ರಾಮದ ತಮ್ಮ ತೋಟದ ಮನೆಯಲ್ಲಿ ಟಿಕೆಟ್ ಘೋಷಣೆಗೂ ಮುನ್ನ ಕರೆಯಲಾಗಿದ್ದ ಸಭೆಯಲ್ಲಿ ಅವರು ಘೋಷಣೆ ಮಾಡಿದರು.
ಇದೇ ವೇಳೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಮತ್ತು ಕಾಂಗ್ರೆಸ್ ಮುಖಂಡ ಅಸಗೋಡು ಜಯಸಿಂಹ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ವ ನಾಶವಾಗಲು ಇವರೇ ಕಾರಣ. ತಮ್ಮ ತೆವಲಿಗೆ ಅಸಗೋಡು ಜಯಸಿಂಹ ಪಕ್ಷವನ್ನು ಬಲಿಕೊಟ್ಟಿದ್ದಾರೆ. ಪಕ್ಷಕ್ಕಾಗಿ ನಾನು ಕಳೆದ 12 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನಗೆ ಟಿಕೆಟ್ ತಪ್ಪಿಸಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ:
ಮುಖಂಡರ ಈ ದ್ವಂದ್ವದಿಂದ ಕಾಂಗ್ರೆಸ್‍ಗೆ ದಕ್ಕೆಯಾಗುತ್ತಿದೆ. ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿಕೆಶಿ ಬಣಗಳಿಂದ ಪಕ್ಷ ಅವನತಿಯತ್ತ ಸಾಗುತ್ತಿದೆ.
ಕಾಂಗ್ರೆಸ್‍ಗೆ ಅಳಿವು ಉಳಿವಿನ ಪ್ರಶ್ನೆ ಉದ್ಭವಾಗಿದೆ. ನನಗೆ ಯಾಕೆ ಹೀಗೆ ಮಾಡಿದರೋ ಗೊತ್ತಿಲ್ಲ. ನಾಯಕರ ಮೇಲೆ ಯಾವ ಒತ್ತಡವಿದೆಯೋ ಗೊತ್ತಿಲ್ಲ. ಗೆಲ್ಲುವಂತ ಅಭ್ಯರ್ಥಿಗೆ ಟಿಕೆಟ್ ಕೊಡುವ ಬದಲು ಸೋಲುವ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಸೋಲುತ್ತದೆ.
ನನಗೆ ಟಿಕೆಟ್ ತಪ್ಪಲು ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಒತ್ತಡವಿದೆ ಎಂದು ಹೇಳಿದ್ದಾರೆ. ಅದು ಯಾವ ರೀತಿಯ ಒತ್ತಡವಿದೆಯೋ ಗೊತ್ತಿಲ್ಲ.ನಾನು ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ.
ಈ ಕ್ಷೇತ್ರದ ಜನ ಕಾಂಗ್ರೆಸ್‍ಗೆ ಏನು ಮಾಡಿದ್ದಾರೆ. ನಾನು ಶಾಸಕನಾಗಿದ್ದಾಗ 3000 ಕೋಟಿ ರೂ ಅನುದಾನ ತಂದೆ. ನನಗೆ ಟಿಕೆಟ್ ಕೈ ತಪ್ಪಲು ಶಾಸಕ ಎಸ್.ವಿ.ರಾಮಚಂದ್ರ ಅವರ ಕೈವಾಡವಿದೆ. ಈ ಹಿಂದೆ ಕಾಂಗ್ರೆಸ್‍ನಲ್ಲಿದ್ದ ಅವರು ತಮ್ಮ ಪ್ರಭಾವ ಬಳಸಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ಕೊಡಿಸಿ ತಾವು ಗೆಲ್ಲುವ ರಣತಂತ್ರ ಹೆಣೆದಿದ್ದಾರೆ.
ಇದಕ್ಕೆ ಶಕುನಿಯ ಪಾತ್ರದಾರಿ ಅಸಗೋಡು ಜಯಸಿಂಹ ಅವರ ಕೈವಾಡವು ಇದೆ. ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಪುತ್ರ ವಿಜಯ್‍ಕುಮಾರ್ ಅವರು ಆದಾಯ ತೆರಿಗೆ ಅಧಿಕಾರಿಯಾಗಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ತಂದೆಗೆ ಟಿಕೆಟ್ ಕೊಡಿಸಿದ್ದಾರೆ.
ಇದು ಕಾಂಗ್ರೆಸ್ ಅಳಿವು ಉಳಿವಿನ ಪ್ರಶ್ನೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರು ಎಲ್ಲಿಗೆ ಹೋಗಬೇಕು. ನಿಮ್ಮ ವೈಯಕ್ತಿಕ ತೆವಲಿಗೆ ಪಕ್ಷ ಬಲಿಕೊಡಬೇಡಿ. ಹುತ್ತ ಕಟ್ಟಿದವರು ನಾವು ಆದರೆ ಆಗಿದ್ದೇನು ಎಂದು ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶ:
ಕಾಂಗ್ರೆಸ್ ಅಳಿವು ಉಳಿವಿನ ಪ್ರಶ್ನೆ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಟಿಕೆಟ್‍ನ 3ನೇ ಪಟ್ಟಿ ಬಿಡುಗಡೆಯಾಯಿತು. ಪಟ್ಟಿಯಲ್ಲಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೆಸರು ಬರುತ್ತಿದ್ದಂತೆ ರಾಜೇಶ್ ಅಭಿಮಾನಿಗಳು, ಹಿತೈಷಿಗಳು ಆಕ್ರೋಶ ವ್ಯಕ್ತಪಡಿಸಿದರು.
ನೀವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸಿ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಭೆಯಲ್ಲಿದ್ದ ಅನೇಕರು ಮಾಜಿ ಶಾಸಕ ಎಚ್.ಪಿ ರಾಜೇಶ್ ಅವರಿಗೆ ಬೆಂಬಲ ಘೋಷಿಸಿದರು.
ಕ್ಷೇತ್ರದಲ್ಲಿ ರಾಜೇಶ್/ರಾಮಚಂದ್ರಗೆ ಫೈಟ್
ಕ್ಷೇತ್ರದಲ್ಲಿ ಎಚ್.ಪಿ. ರಾಜೇಶ್ ಮತ್ತು ಶಾಸಕ ಎಸ್.ವಿ.ರಾಮಚಂದ್ರ ಇಬ್ಬರಿಗೆ ಪೈಪೋಟಿ ಮಾತ್ರ. ಗೆಲ್ಲುವ ಸಾಮಥ್ರ್ಯ ಇರುವವರಿಗೆ ಟಿಕೆಟ್ಬಕೊಡಿ. ಕಾಂಗ್ರೆಸ್ ಉಳಿಸುವ ಕೆಲಸ ನಾನು ಮಾಡ್ತಿದ್ದೇನೆ.
ಕಾಂಗ್ರೆಸ್ ತತ್ವ ಸಿದ್ಧಾಂತ ಇರುವ ಪಕ್ಷ. ಟಿಕೆಟ್ ಕೊಟ್ಟರೆ 30 ಸಾವಿರ ಲೀಡ್ ನಲ್ಲಿ ಗೆಲ್ಲುತ್ತೇನೆ. ಕಾಲ ಮಿಂಚಿಲ್ಲ. ವರಿಷ್ಠರು ಗೆಲ್ಲುವಂತ ಅಭ್ಯರ್ಥಿಗೆ ಟಿಕೆಟ್ ಕೊಡಲಿ. ಟಿಕೆಟ್ ಪಟ್ಟಿಯಲ್ಲಿ ದೇವೆಂದ್ರಪ್ಪ ಪ್ಯಾನಲ್‍ಗೆ ಬಂದಿದ್ದು ಹೇಗೆ. ಕೆ.ಪಿ. ಪಾಲಯ್ಯ ಅವರು ಪ್ಯಾನಲ್‍ಗೆ ಬರಲೇ ಇಲ್ಲ. ನನಗಿಂತ ಕಾಂಗ್ರೆಸ್ ಪಕ್ಷದಲ್ಲಿ ಅವರು ಸೀನಿಯರ್. ಆದರೆ ದೇವೇಂದ್ರಪ್ಪ ಅವರಿಗೆ ಟಿಕೆಟ್ ಸಿಕ್ಕಿತು. ದೇವೇಂದ್ರ ಅವರಲ್ಲಿ ದುಡ್ಡಿದೆ ಎಂದು ಟಿಕೆಟ್ ಕೊಡುತ್ತಾರೆ.
ದುಡ್ಡೇ ಮಾನದಂಡವಾದರೆ ಕಾಂಗ್ರೆಸ್ ಸರ್ವ ನಾಶವಾಗುತ್ತದೆ. ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕುವುದಾದರೆ ಹೇಗೆ? ನಾಯಕರಿಗೆ ಯಾವ ಒತ್ತಡವಿತ್ತು ಎಂಬುದು ಬಹಿರಂಗವಾಗಬೇಕು ಎಂದು ಎಚ್.ಪಿ.ರಾಜೇಶ್ ಆಗ್ರಹಿಸಿದರು.
ಧರಣಿಗೆ ತೀರ್ಮಾನ
ಟಿಕೆಟ್ ಘೋಷಣೆಗೂ ಮುನ್ನ ನಡೆದ ಸಭೆಯಲ್ಲಿ ಕಾಂಗ್ರೆಸ್‍ನ ಮುಖಂಡರು, ಕಾರ್ಯಕರ್ತರ ದಂಡು ನೆರೆದಿತ್ತು.ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಎಲ್.ಬಿ.ಬೈರೇಶ್ ಸೇರಿದಂತೆ ಅನೇಕ ಮುಖಂಡರು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮನೆ ಮುಂದೆ ಪ್ರತಿಭಟನಾ ಧರಣಿ ಮಾಡೋಣ ಎಲ್ಲರೂ ಬನ್ನಿ ಎಂದು ಹೇಳಿದರು.
ಈ ವೇಳೆ ಕೆಪಿಸಿಸಿ ಕ್ಷೇತ್ರದ ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್, ಯು.ಜಿ.ಶಿವಕುಮಾರ್, ರಾಮರೆಡ್ಡಿ, ಕೆಪಿಸಿಸಿ ಎಸ್ಟಿ ಸಮಿತಿ ಸದಸ್ಯ ಸಿ.ತಿಪ್ಪೇಸ್ವಾಮಿ, ಅರಸಿಕೆರೆ ಭಾಗದ ಮುಖಂಡ ಯರಬಳ್ಳಿ ಉಮಾಪತಿ,ಹಾಲಸ್ವಾಮಿ, ಅರಿಶಿಣಗುಂಡಿ ರಾಜು,ಯಶವಂತಗೌಡ್ರು, ಪಪಂ ಮಾಜಿ ಸದಸ್ಯ ಇಕ್ಬಾಲ್ ಅಹ್ಮದ್ ಖಾನ್, ತಿಪ್ಪೇಸ್ವಾಮಿ, ವಕೀಲರಾದ ಬಸವರಾಜಪ್ಪ, ಜಿಪಂ ಮಾಜಿ ಅಧ್ಯಕ್ಷೆ ನಾಗರತ್ನಮ್ಮ, ಕಲ್ಲಹಳ್ಳಿ ಹನುಮಂತಪ್ಪ, ಬೋಜಣ್ಣ, ಸಲಾಂ ಸಾಬ್, ಕಿತ್ತೂರು ಜಯ್ಯಣ್ಣ ಸೇರಿದಂತೆ ಸಾವಿರಾರು ಜನ ಅಭಿಮಾನಿಗಳು ಸಭೆಯಲ್ಲಿದ್ದರು.