ಜಗಳೂರನ್ನು ಸಂಪೂರ್ಣ ಬರ ಪೀಡಿತ ಪಟ್ಟಿಗೆ ಸೇರ್ಪಡೆಯಾಗದೆ ರೈತರಿಗೆ ಅನ್ಯಾಯ: ಮಾಜಿ ಶಾಸಕ SVR

Suddivijaya
Suddivijaya September 5, 2023
Updated 2023/09/05 at 3:08 PM

ಸುದ್ದಿವಿಜಯ, ಜಗಳೂರು: ನಂಜುಂಡಪ್ಪ ವರದಿಯಲ್ಲಿ ಜಗಳೂರು ತಾಲ್ಲೂಕು ಅತ್ಯಂತ ಹಿಂದುಳಿದ ಬರಪೀಡಿತ ತಾಲ್ಲೂಕು ಎಂದು ಉಲ್ಲೇಖವಾಗಿದೆ. ವಾರ್ಷಿಕ ಮಳೆಯ ಪ್ರಮಾಣ ವಾಡಿಕೆಗಿಂತ ಈ ಬಾರಿ ಕಡಿಮೆಯಾಗಿದ್ದರೂ ಸಹ ಮಧ್ಯಮ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿರುವ ಕ್ರಮ ಜನತೆಗೆ, ರೈತರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸರಕಾರದ ವಿರುದ್ಧ ಕಿಡಿ ಕಾರಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರದಿಂದ ನಲುಗಿ ಹೋಗಿರುವ ಕ್ಷೇತ್ರವನ್ನು ಸರಕಾರ ಇದುವರೆಗೂ ಬರ ಪೀಡಿತ ಎಂದು ಘೋಷಿಸಿಲ್ಲ. ಶಾಸಕ ಬಿ.ದೇವೇಂದ್ರಪ್ಪ ಸಂಪೂರ್ಣ ಬರಪೀಡಿತ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಸ್ಯಾಟಲೈಟ್ ಸರ್ವೆ ಆಧಾರದ ಮೇಲೆ ಮಧ್ಯಮ ಬರಪೀಡಿತ ತಾಲೂಕು ಎಂದು ಸರಕಾರಕ್ಕೆ ವರದಿಸಲ್ಲಿಸಿದ್ದಾರೆ.

ಆದರೆ ಇಲ್ಲಿ ವಾಸ್ತವ ಭೀಕರವಾಗಿದೆ. ಮೊದಲನೇ ಹಂತದಲ್ಲಿ 116 ತಾಲ್ಲೂಕು ಸಂಪೂರ್ಣ ಬರಪೀಡಿತ ಮತ್ತು 2ನೇ ಹಂತದಲ್ಲಿ 86 ತಾಲೂಕುಗಳನ್ನು ಬರಪೀಡಿತ ಎಂದು ಸರಕಾರದ ಘೋಷಣೆ ಪಟ್ಟಿಯಲ್ಲಿದೆ. ಆದರೆ ನಮ್ಮ ತಾಲ್ಲೂಕನ್ನು ಅದರಲ್ಲಿ ಸೇರಿಸಿಲ್ಲ. ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ತಾಲ್ಲೂಕುಗಳನ್ನು ಸಂಪೂರ್ಣ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ನಮ್ಮ ತಾಲ್ಲೂಕನ್ನು ಏಕೆ ಸಂಪೂರ್ಣ ಬರ ಪೀಡಿತ ಪಟ್ಟಿಗೆ ಸೇರಿಸಿಲ್ಲ ಎಂದು ಪ್ರಶ್ನಿಸಿದರು.

ವಾರ್ಷಿಕವಾಗಿ ಮಳೆ ಪ್ರಮಾಣ ಇಲ್ಲಿ ಅತ್ಯಲ್ಪ. ನಿಜವಾದ ಬರ ನಮ್ಮಲ್ಲಿದೆ. ಬೆಳೆಗಳಿಗೆ ಬೆಂಕಿಹಚ್ಚಿದರೆ ಸುಟ್ಟು ಹೋಗುವಷ್ಟು ಒಣಗಿ ನಿಂತವೆ. ಇರುವ ಅಲ್ಪ ಬೆಳೆಗಳಿಗೂ ಕಾಡು ಹಂದಿಗಳ ಕಾಟ ಹೆಚ್ಚಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಬಹುದು.

ಇಡೀ ತಾಲ್ಲೂಕಿಗೆ ಬರ ಆವರಿಸಿದೆ. ಜೊತೆಗೆ ಜನರು ಗುಳೆ ಹೋಗುತ್ತಿದ್ದಾರೆ. ಬರದ ಛಾಯೆ ಆವರಿಸಿದ್ದು ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೂ ಅಧಿಕಾರಿಗಳು ಸಂಪೂರ್ಣ ಬರ ಪೀಡಿತ ಪಟ್ಟಿಗೆ ಸೇರಿಸದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಿಗೆ ಸಂಪೂರ್ಣ ಸಹಕಾರ:

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಕ್ಷೇತ್ರದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ಜಾರಿಯಾದ ಬಿಳಿಚೋಡು ರಸ್ತೆ, ಅರಸಿಕೆರೆ ದ್ವಿಮುಖ ರಸ್ತೆ ಅರ್ಧಕ್ಕೆ ನಿಂತು ಹಾಳು ಹಂಪಿಯಂತಾಗಿದೆ.

ಜಗಳೂರು ಪಟ್ಟಣದ ಕೋರ್ಟ್ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿಲ್ಲ. 434 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಂಡ ಗುತ್ತಿಗೆದಾರ ಕೆಲಸ ಮಾಡದೇ ಹಿಂದೆ ಸರಿದಿದ್ದಾರೆ. ನಗರೊತ್ಥಾನ ಕಾಮಗಾರಿ, ಮುನ್ನೂರು ಮನೆಗಳ ಕಾಮಗಾರಿ ಅರ್ಧಕ್ಕೆನಿಂತಿವೆ. ಕೆರೆ ಏರಿ ರಸ್ತೆ ಪೂರ್ಣಗೊಂಡಿಲ್ಲ ಎನ್ನುವ ದೂರು ಕೇಳಿಬಂದಿದೆ.

ಶಾಸಕರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತ್ವರಿತಕ್ಕೆ ಮುಂದಾಗಿದ್ದಾರೆ ಎಂದು ಕೇಳಿದ್ದೇನೆ. ಉತ್ಸಾಹದಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಮಾತ್ರ ಸಂಪೂರ್ಣವಾಗಿ ನಿಂತಿರುವುದು ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

ಕೆಲವರು ಶಾಸಕರ ಜೊತೆ ಮಾಜಿ ಶಾಸಕ ರಾಮಚಂದ್ರ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾನು ಶಾಸಕರ ಕಾಲು ಎಳೆಯುವ ವ್ಯಕ್ತಿಯಲ್ಲ. ಅಭಿವೃದ್ಧಿ ಕೆಲಸಕ್ಕೆ ಪ್ರೋತ್ಸಾಹ ನೀಡುವ ವ್ಯಕ್ತಿ ಎಂದರು.

ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರೇ ನಮ್ಮ ಪಕ್ಷದ ಅಭ್ಯರ್ಥಿ. ಪಕ್ಷದಲ್ಲಿ ಸಾಕಷ್ಟು ಜನ ಅಭ್ಯರ್ಥಿಗಳಿದ್ದರೂ ಸಿದ್ದೇಶ್ವರ್ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದೆಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಪಪಂ ಮಾಜಿ ಅಧ್ಯಕ್ಷ, ಸದಸ್ಯ ರೇವಣಸಿದ್ದಪ್ಪ, ಪಾಪಲಿಂಗಪ್ಪ, ದೇವರಾಜ್ ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!