ಮಾಜಿ ಶಾಸಕ ಗುರುಸಿದ್ದನಗೌಡ್ರು ಚುನಾವಣೆಯಲ್ಲಿ ತಟಸ್ಥ, ಬಿಜೆಪಿಗೆ ಒಳ ಹೊಡೆತದ ಭೀತಿ!

Suddivijaya
Suddivijaya May 8, 2023
Updated 2023/05/08 at 7:12 AM

ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಭದ್ರ ಕೋಟೆಯನ್ನೇ ಭೇದಿಸಿ 2004ರಲ್ಲಿ ಶಾಸಕರಾದ ಟಿ.ಜಿ.ಗುರುಸಿದ್ದನಗೌಡರು ಈಗಲೂ ಬಿಜೆಪಿಯ ಪ್ರಶ್ನಾತೀತ ನಾಯಕ.
ಆದರೆ ಗುರುಸಿದ್ದನಗೌಡರು ಇದುವರೆಗೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಪರ ಮತಪ್ರಚಾರಕ್ಕಾಗಲಿ, ರೋಡ್ ಶೋಗಳಲ್ಲಿ ಕಣ್ಣಿಗೆ ಕಾಣಿಸಿಕೊಂಡಿಲ್ಲ. ಅತ್ತಿತ್ತ ಸುಳಿದಾಡಿಲ್ಲ.

ಜಗಳೂರು ಪಟ್ಟಣಕ್ಕೆ ಬಂದು ಹೋಗುತ್ತಿದ್ದರೂ ಸಹ ಅವರು ಎಸ್‍ವಿಆರ್ ಪರ ಪ್ರಚಾರಕ್ಕೆ ಬರದೇ ಇರುವುದು ಈಗ ಮತದಾರಿಗೆ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
2008ರಲ್ಲಿ ಎಸ್ಟಿ ಮೀಸಲು ಕ್ಷೇತ್ರವಾದ ನಂತರ ಕಳೆದ ಎಲ್ಲ ಚುನಾವಣೆಗಳಲ್ಲಿ ಯಾರು ಯಾರು ಬಿಜೆಪಿ ಅಭ್ಯರ್ಥಿಗಳಾದರೋ ಅವರೆಲ್ಲರ ಪರ ಕಾಣಿಸಿಕೊಂಡು ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತಿದ್ದ ಗೌಡರು ಈ ಬಾರಿಯ ಚುನಾವಣೆಯಲ್ಲಿ ಎಸ್‍ವಿಆರ್ ಪರ ಪ್ರಚಾರಕ್ಕೆ ಬರದೇ ಇರುವುದು ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ ಎಂದು ಅನೇಕ ಲಿಂಗಾಯತ ಮುಖಂಡರ ಅಭಿಪ್ರಾಯವಾಗಿದೆ.

ಹರಿಹರ ಅಭ್ಯರ್ಥಿ ಪರ ಮತಯಾಚನೆ:

ಹರಿಹರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಪಿ.ಹರೀಶ್ ಪರ ನಿನ್ನೆಯಷ್ಟೇ ಹರಿಹರ ಪಟ್ಟಣದಲ್ಲಿ ರೋಡ್ ಶೋ ವೇಳೆ ಕಾಣಿಸಿಕೊಂಡು ಮತಯಾಚನೆ ಮಾಡಿರುವ ಗುರುಸಿದ್ದನಗೌಡರು ತಾವು ಪ್ರತಿನಿಧಿಸಿದ್ದ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಪರ ಮತಯಾಚನೆ ಮಾಡಲು ಬಾರದೇ ಇರುವುದು ಎಸ್‍ವಿಆರ್ ಮತ್ತು ಗೌಡರ ನಡುವಿನ ಮುಸುಕಿನ ಗುದ್ದಾಟ ಗುಟ್ಟಾಗಿ ಉಳಿದಿಲ್ಲ ಎಂಬುದು ಮತದಾರರ ಅಭಿಪ್ರಾಯ.

ಬಿಜೆಪಿ ಒಳ ಹೊಡೆತ?

ಗುರುಸಿದ್ದನಗೌಡರು ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿಬೆಳೆಸಿದ ಪ್ರಶ್ನಾತೀತ ನಾಯಕ. ಆದರೆ ಅವರನ್ನು ಇತ್ತೀಚೆಗೆ ರಾಮಚಂದ್ರ ಅವರು ಕಡೆಗಣಿಸಿದ್ದು ಜಗಜ್ಜಾಹೀರಾಗಿದೆ. ಕಳೆದ ಆರು ತಿಂಗಳಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಂದಾಗ ಗುರುಸಿದ್ದನಗೌಡರ ಭಾವಚಿತ್ರಗಳನ್ನು ರಾಮಚಂದ್ರ ಅವರು ಫ್ಲಕ್ಸ್, ಬ್ಯಾನರ್‍ಗಳಲ್ಲಿ ಹಾಕಿಸಲಿಲ್ಲ.

ಇದಕ್ಕೆ ಕಾರಣ ಅವರಲ್ಲಿರುವ ವೈಮನಸ್ಸು. ಕಾರಣವೇನು ಎಂಬುದು ಅವರಿಬ್ಬರಿಗೆ ಗೊತ್ತು ಎಂದು ಹೆಸರೇಳಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರ ಅಭಿಪ್ರಾಯ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ಹತ್ತು ದಿನಗಳ ಹಿಂದೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ರೋಡ್ ಶೋಗೆ ಮಾಡಿದರು ಆದರೆ ಆಗಲೂ ಗೌಡರು ಜಗಳೂರು ಪಟ್ಟಣದಲ್ಲೇ ಇದ್ದರೂ ಸಹ ರಾಮಚಂದ್ರ ಪರವಾಗಿ ಪ್ರಚಾರಕ್ಕೆ ಬರಲಿಲ್ಲ.

ಕ್ಷೇತ್ರದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ. 45 ಸಾವಿರ ಲಿಂಗಾಯ ಮತದಾರಿದ್ದಾರೆ. ಗುರುಸಿದ್ದನಗೌಡರ ಅಭಿಮಾನಿಗಳು, ಬಂಧುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ಕಡೆಗಣಿಸಿರುವ ಈಗಿನ ಶಾಸಕರಿಗೆ ಈ ಬಾರಿ ಚುನಾವಣೆಯಲ್ಲಿ ಒಳ ಹೊಡೆತದ ಭೀತಿ ಶುರುವಾಗಿದೆ.

ಗುರುಸಿದ್ದನಗೌಡರ ಬೆಂಬಲ ಯಾರಿಗೆ?

ಗುರುಸಿದ್ದನಗೌಡರು ಬಿಜೆಪಿಯಲ್ಲಿ ಇದ್ದರೂ ಸಹ ತಟಸ್ಥವಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಅವರು ಯಾರ ಪರ ಇದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ ಅವರ ಪುತ್ರರಾದ ಅರವಿಂದ್ ಮತ್ತು ಪ್ರವೀಣ್‍ಕುಮಾರ್ ಅವರು ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಪರವಾಗಿ ನಿಂತಿದ್ದಾರೆ. ಇನ್ನೊಬ್ಬ ಪುತ್ರ ಡಾ.ರವಿಕುಮಾರ್ ಬಿಜೆಪಿಯಲ್ಲಿದ್ದು ಎಸ್.ವಿ.ರಾಮಚಂದ್ರ ಪರವಾಗಿ ಚುನಾವಣಾ ಕ್ಯಾಂಪೇನ್ ಮಾಡುತ್ತಿರುವುದು ಅನೇಕರಲ್ಲಿ ಗೊಂದಲ ಮೂಡಿಸಿದೆ.

ಒಟ್ಟಿನಲ್ಲಿ ಗೌಡರು ತಟಸ್ಥವಾಗಿರುವುದು ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗೆ ವರವಾದರೆ ಬಿಜೆಪಿಗೆ ಶಾಪವಾಗುತ್ತಾ ಎಂಬುದು ಮೇ.13 ಶನಿವಾರದ ಫಲಿತಾಂಶದಲ್ಲಿ ಸ್ಪಷ್ಟವಾಗಲಿದೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!