ಜಗಳೂರು: ಸೊಕ್ಕೆ ಗ್ರಾಪಂ ಸಮಸ್ಯೆಗಳಿಗೆ ZP, CEO ಅಲ್ಪ ವಿರಾಮ!

Suddivijaya
Suddivijaya February 15, 2024
Updated 2024/02/15 at 3:00 PM

ಸುದ್ದಿವಿಜಯ, ಜಗಳೂರು: ಸ್ವಾಮಿ, ನಮ್ಮ ಮನೆಗೆ ನೀರು ಬರುತ್ತಿಲ್ಲ ನಳ ಅಳವಡಿಸಿಕೊಡಿ, ಪಂಚಾಯಿತಿಯವರಿಗೆ ಹೇಳಿದರೂ ಮಾಡಿಲ್ಲ… ಗ್ರಾಮದಲ್ಲಿ ಚರಂಡಿಗಳಲ್ಲಿ ಕೊಳಚೆ ನೀರು ಕಟ್ಟಿಕೊಂಡಿವೆ, ಸೊಳ್ಳೆಗಳ ಕಾಟ ತಾಳಲಾಗುತ್ತಿಲ್ಲ…

ಚಿಕ್ಕಬಂಟನಹಳ್ಳಿ ಮತ್ತು ಸೊಕ್ಕೆ ಗ್ರಾಮಗಳಲ್ಲಿ ಸ್ಮಶನ ಒತ್ತುವರಿಯಾಗಿದೆ… ನಮ್ಮ ಗ್ರಾಮದ ಸುಮಾರು 2 ಕಿಮೀ ಹಳ್ಳ ಕಬಳಿಕೆಯಾಗಿದೆ ಬಿಡಿಸಿಕೊಡಿ…

ನಮ್ಮೂರಿಗೆ ಸರಕಾರಿ ಬಸ್ ವ್ಯವಸ್ಥೆಯಿಲ್ಲ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಬಸ್ ವ್ಯವಸ್ಥೆ ಕಲ್ಪಿಸಿ ಹೀಗೆ ಹತ್ತು ಹಲವು ಸಮಸ್ಯೆಗಳ ಅರ್ಜಿ ಹಿಡಿದ ಸಾರ್ವಜನಿಕರು ಜಿಪಂ ಸಿಇಒ ಡಾ. ಸುರೇಶ್ ಬಿ. ಇಟ್ನಾಳ್ ಗಮನಕ್ಕೆ ತಂದರು.

ಎರಡು ಬಾರಿ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಆಯ್ಕೆಯಾಗಿರುವ ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಗುರುವಾರ ಜಿಪಂ, ತಾಪಂ ವತಿಯಿಂದ ಸಾರ್ವಜನಿಕರಿಂದ ದೂರು/ಮನವಿಗಳನ್ನು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸರಮಾಲೆಯೇ ಕಂಡು ಬಂದವು.ಸಾರ್ವಜನಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಸಿಇಒ, ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಇತ್ಯರ್ಥ ಪಡಿಸಿದರೆ, ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿಕೊಂಡರು.

ನಂತರ ಮಾತನಾಡಿದ ಸಿಇಒ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿ ಬುಧವಾರ ಜಿಲ್ಲೆಯ ಒಂದು ತಾಲೂಕಿನ ಒಂದು ಗ್ರಾಪಂನಲ್ಲಿ ಸಾರ್ವಜನಿಕರ ದೂರು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ದೇಶನ ನೀಡಿದ್ದಾರೆ.

ಹೀಗಾಗಿ ಸೊಕ್ಕೆ ಗ್ರಾಮದಲ್ಲಿ ದೂರು ಸ್ವೀಕರಿಸಲಾಗಿದೆ. ನಿಮ್ಮ ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಇನ್ನು ಕೆಲವು ಸಮಸ್ಯೆಗಳಿಗೆ ಸ್ವಲ್ಪ ವಿಳಂಬವಾಗಬಹುದು ಆದರೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ನಮ್ಮ ಮಿತಿಯೊಳಗೆ ಬಗೆಹರಿಸಲಾಗುವುದು ಎಂದರು.

ಸೊಕ್ಕೆ ಗ್ರಾಮದ ಕ್ಯಾಂಪ್ ಮತ್ತು ಚಿಕ್ಕಬಂಟನಹಳ್ಳಿಯಲ್ಲಿ ಸರಕಾರಿ ಜಮೀನು ಇದ್ದು, ಆಶ್ರಯ ನಿವೇಶನ ಎಂದು ಕಂದಾಯ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಹಕ್ಕುಪತ್ರದ ನಂತರ ಇ-ಸ್ವತ್ತು ವಿತರಿಸುವ ಕೆಲಸ ಆಗಬೇಕಿದೆ.

ಕೆಲವರು ಕ್ಯಾಂಪ್‍ನಲ್ಲಿ ಗುಡಿಸಲು ಕಟ್ಟಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಪ್ರಾಮಾಣಿಕವಾಗಿ ಆಗಬೇಕು. ಕೇಸ್ ಕೋರ್ಟ್‍ನಲ್ಲಿ ಇದ್ದರೆ ಗ್ರಾಮ ಸಭೆಯಲ್ಲಿ ನಡಾವಳಿ ಮಾಡಿ ಗುಡಿಸಲು ತೆರವುಗೊಳಿಸಲು ನೋಟಿಸ್ ನೀಡಿ.

ಯಾರು ಅರ್ಹ ಫಲಾನುಭವಿಗಳಿದ್ದಾರೆ ಅಂತವರಿಗೆ ರಾಜೀವ್‍ಗಾಂಧಿ ವಸತಿ ಯೋಜನೆಯಿಂದ ಅನುದಾನ ನೀಡಲು ಸಾಧ್ಯವಿದೆ. ಅದಕ್ಕೂ ಮೊದಲು ಗ್ರಾಮ ಸಭೆಯಲ್ಲಿ ಚರ್ಚಿಸಿ ಕೋರ್ಟ್ ಗಮನಕ್ಕೆ ತಂದು ತುರ್ತಾಗಿ ಕೆಲಸ ಮಾಡಿ ಎಂದು ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರಿಗೆ ತಿಳಿಸಿದರು.

ಸ್ವಚ್ಛ ಸಂಕೀರ್ಣಕ್ಕೆ ಅನುದಾನ ಬರುವಂತೆ ಮಾಡುತ್ತೇನೆ. ಹಳ್ಳ ಒತ್ತುವರಿಗೆ ಸಂಬಂಧಿಸಿದಂತೆ ಸರ್ವೆ ಮಾಡಿಸಲು ಸೂಚನೆ ನೀಡಲಾಗಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.

ಚಿಕ್ಕಬಂಟನಹಳ್ಳಿ ಮತ್ತು ಸೊಕ್ಕೆ ಗ್ರಾಮದಲ್ಲಿ ಸ್ಮಶಾನ ಒತ್ತುವರಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದೀರಿ. ಈ ಸಮಸ್ಯೆಯನ್ನು ಡಿಡಿಎಲ್‍ಆರ್ ಗಮನಕ್ಕೆ ತಂದು ಸರ್ವೆ ಮಾಡಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ತಾಪಂ ಸಿಇಒ ಕೆ.ಟಿ.ಕರಿಬಸಪ್ಪ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಸಾದಿಕ್‍ ಉಲ್ಲಾ, ನರೇಗಾ ಎಡಿ ಚಂದ್ರಶೇಖರ್, ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಯ್ಯ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಗ್ರಾಪಂ ಅಧ್ಯಕ್ಷ ತಿರುಮಲಾ, ಉಪಾಧ್ಯಕ್ಷರಾದ ಚೌಡಮ್ಮ, ಪಿಡಿಒ ಶಿವಕುಮಾರ್, ಬಿಇಒ ಹಾಲಮೂರ್ತಿ, ಡಿ.ಡಿ.ಹಾಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಸಾರ್ವಜನಿಕ ಸಾರಿಗೆ ಇಲ್ಲ: 

ಸೊಕ್ಕೆ ಗ್ರಾಮ ದೊಡ್ಡ ಹೋಬಳಿಯಾಗಿದ್ದು ಈ ಗ್ರಾಮದಿಂದ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾವಣಗೆರೆ ನಗರಕ್ಕೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ. ಆದರೆ ಸಾರ್ವಜನಿಕ ಸಾರಿಗೆ ಇಲ್ಲ ಎಂದು ಗ್ರಾಮಸ್ಥರು ಸಿಇಒ ಗಮನಕ್ಕೆ ತಂದರು.

ತಕ್ಷಣವೇ ಸ್ಪಂದಿಸಿದ ಅವರು ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.

ಪಶು ವೈದ್ಯರೇ ಇಲ್ಲ ಸ್ವಾಮಿ…

ನಮ್ಮ ಗ್ರಾಮದಲ್ಲಿ ಸುಸಜ್ಜಿತ ಪಶು ಆಸ್ಪತ್ರೆಯಿದ್ದರೂ ಪಶುವೈದ್ಯ ಪರೀಕ್ಷಕರೇ ಇಲ್ಲ ಎಂದು ಸಾರ್ವಜನಿಕರು ದೂರು ನೀಡಿದರು. ತಕ್ಷಣವೇ ಸ್ಥಳದಲ್ಲಿ ಇದ್ದ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜ್ ಅವರನ್ನು ಕರೆದ ಸಿಇಒ, ಸಮಸ್ಯೆ ಬಗೆ ಹರಿಸಿ ಎಂದರು.

ಡಾ.ರೋಹಿತ್ ಎಂಬುವರನ್ನು ನಿಯೋಜಿಸಲಾಗಿದೆ ಎಂದು ಉತ್ತರಿಸಿದರು. ವಾರದಲ್ಲಿ ಎರಡು ದಿನ ಮಾತ್ರ ಕೆಲಸ ಮಾಡುತ್ತಾರೆ ಜನರು ಸಹಕರಿಸಿ ಎಂದು ಸಿಇಒ ಜನರಿಗೆ ಹೇಳಿದರು.

ಅನುದಾನ ಆದ್ಯತೆ ಅನುಸಾರ ನೀಡಲಾಗುವುದು: CEO

ನಿಮ್ಮ ಪಂಚಾಯಿತಿಗೆ ರಸ್ತೆ, ನೀರು, ಚರಂಡಿ ಮತ್ತು ಜೆಜೆಎಂ ಕಾಮಗಾರಿಯನ್ನು ಅನುದಾನ ಆದ್ಯತೆ ಅನುಸಾರ ನೀಡಲಾಗುವುದು. ಏನೇ ಸಮಸ್ಯೆಯಿದ್ದರೂ ಮುಕ್ತವಾಗಿ ಹೇಳಿಕೊಳ್ಳಿ.ಸಮಸ್ಯೆ ಬಗೆಹರಿಸಲು ನಾವೆಲ್ಲ ಬಂದಿದ್ದೇವೆ. ನಿಮ್ಮ ದೂರು ಮತ್ತು ಮನವಿಗಳನ್ನು ಪಟ್ಟಿಮಾಡಿಕೊಂಡಿದ್ದೇನೆ. ಅಧ್ಯಕ್ಷರಗು ಸದಸ್ಯರು 15 ದಿನದ ಒಳಗಾಗಿ ಕಚೇರಿಗೆ ಬಂದು ಸಮಸ್ಯೆ ಬಗೆಹರಿದಿದೆಯಾ, ಇಲ್ಲವೇ ಎಂದು ನಮ್ಮ ಗಮನಕ್ಕೆ ತನ್ನಿ ಎಂದು ಸಿಇಒ ಸುರೇಶ್ ಬಿ. ಇಟ್ನಾಳ್ ಅಧ್ಯಕ್ಷರಿಗೆ ಸೂಚನೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!