ಸುದ್ದಿವಿಜಯ, ಜಗಳೂರು: ಪಟ್ಟಣದ ಹೃದಯ ಭಾಗದಲ್ಲಿರುವ ಜೆಸಿಆರ್ ಬಡವಾಣೆಯ ಗಣೇಶ ಗುಡಿ ರಸ್ತೆಯಲ್ಲಿ ಡಿ.ವಿ.ನಾಗರಾಜ ಎಂಬುವವರು ತಮ್ಮ ನೂತನ ಮನೆಯ ನಿರ್ಮಾಣದ ಟಾಯ್ಲೆಟ್ ಗುಂಡಿಯನ್ನು ರಸ್ತೆಯಲ್ಲೇ ನಿರ್ಮಾಣ ಮಾಡಿಕೊಂಡಿದ್ದು ಪಪಂ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಶನಿವಾರ ನಿವೃತ್ತ ಪ್ರಚಾರ್ಯ ಪ್ರೊ.ಅನಂತರೆಡ್ಡಿ ಒತ್ತಾಯಿಸಿದ್ದಾರೆ.
ಪಟ್ಟಣದ ಜೆಸಿಆರ್ ಬಡಾವಣೆಯಲ್ಲಿರುವ ಗಣೇಶ ಗುಡಿಯಿಂದ ಮಾಲತಿ ಕಾಲೇಜು ಸಂಪರ್ಕ ಕಲ್ಪಿಸುವ 30 ಅಡಿ ರಸ್ತೆಯಲ್ಲಿ ಅನೇಕರು ಒತ್ತುವರಿ ಮಾಡಿಕೊಂಡು ಕಾಂಪೌಂಡ್‍ಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ನಾಗರಾಜ್ ಎಂಬ ವ್ಯಕ್ತಿಯು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು ಆ ಮನೆಗೆ ಬೇಕಾಗುವ ಶೌಚಾಲಯ ಗುಂಡಿಯನ್ನು ರಸ್ತೆಯಲ್ಲೇ ನಿರ್ಮಾಣ ಮಾಡುತ್ತಿದ್ದಾರೆ.
ಟಾಯ್ಲೆಟ್ ಗುಂಡಿಯ ಪಕ್ಕದಲ್ಲೇ ವಿವಿಧ ಬಡಾವಣೆಗಳಿಗೆ ಸಾರ್ವಜನಿಕ ಸಂಪರ್ಕದ ಕುಡಿಯುವ ನೀರಿನ ಪೈಪ್ ಹಾದು ಹೋಗಿದ್ದು ಒಂದು ವೇಳೆ ಭವಿಷ್ಯದಲ್ಲಿ ಪೈಪ್‍ಗೆ ಹಾನಿಯಾದರೆ ಕುಡಿಯುವ ನೀರಿಗೆ ಶೌಚದ ಮಲ ಮಿಶ್ರಿತ ನೀರು ಸೇರಿ ಸಾಕಷ್ಟು ಪ್ರಮಾಣದ ಜೀವ ಹಾನಿಯಾಗಲಿದೆ ಎಂದು ಹೇಳಿದರು.
ರಸ್ತೆ ಪಕ್ಕದಲ್ಲೇ ಪೈಪ್ ಲೈನ್ ಹಾದು ಹೋಗಿರುವುದರಿಂದ ಬೃಹತ್ ವಾಹನಗಳು ಹತ್ತಿ ಹೋದರೆ ಪೈಪ್ ಒಡೆದು ಚಿತ್ರದುರ್ಗದ ಕಾವಾಡಿಗರಹಟ್ಟಿ ಘಟನೆ ಮರುಕಳಿಸಬಹುದು ಹೀಗಾಗಿ ಅಂತಹ ದುರಂತಗಳು ಆಗದಂತೆ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಎಂಜಿನಿಯರ್ ಶ್ರುತಿ ಅವರು ಕ್ರಮ ಕೈಗೊಳ್ಳಬೇಕು. ಈ ಒತ್ತುವರಿಗೆ ಸಂಬಂಧಿಸಿದಂತೆ ಲಿಖಿತ ದೂರು ನೀಡಿದ್ದೇನೆ ಎಂದು ತಿಳಿಸಿದರು.ಕಾನೂನು ಪ್ರಕಾರ ಕ್ರಮ
ಡಿ.ವಿ.ನಾಗರಾಜ್ ಎಂಬುವರು ಅನಧಿಕೃತ ಪರವಾನಿಗೆ ಇಲ್ಲದೇ ಹಾಗೂ ಒತ್ತುವರಿ ಮಾಡಿ ಕಟ್ಟಡ ಮತ್ತು ಶೌಚಾಲಯ ಗುಂಡಿ ಕಟ್ಟುತ್ತಿರುವುದರ ಬಗ್ಗೆ 1964ನೇ ಕಲಂ 180 (1) ಮತ್ತು (2) ರ ವಿರುದ್ಧವಾಗಿದೆ. ಕಟ್ಟಡ ಮತ್ತು ಶೌಚಾಲಯ ಗುಂಡಿಯನ್ನು ತೆರವುಗೊಳಿಸಿ ಎಂದು ನೋಟಿಸ್ ಕೊಡಲಾಗಿದೆ.
ಅವರು ಗುಂಡಿ ಮುಚ್ಚಿ ಬೇರೆಕಡೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಪಪಂ ಎಂಜಿನಿಯರ್ ಶ್ರುತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತಹಿತಿ ನೀಡಿದರು.