ಸುದ್ದಿವಿಜಯ, ಜಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಸಾಂಸ್ಕೃತಿಕ ಭನವನ್ನು ಸಿಮೆಂಟ್ ಗೋದಾಮಾಗಿ ಮಾಡಿಕೊಂಡ ಗುತ್ತಿಗೆದಾರ ಸೈಯದ್ ಜಿಲಾನಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಶನಿವಾರ ತರಾಟೆಗೆ ತೆಗೆದುಕೊಂಡರು.
‘ಸಿಮೆಂಟ್ ಗೊದಾಮಾದ ಸಾಂಸ್ಕೃತಿಕ ಭವನ’ ಎಂಬ ಸುದ್ದಿ ಸುದ್ದಿವಿಜಯದಲ್ಲಿ ಆ.11 ಎಂದು ಶುಕ್ರವಾರ ಪ್ರಕಟವಾಗಿತ್ತು. ಸುದ್ದಿ ಪ್ರಕಟವಾಗುತ್ತಿದ್ದಂತೆ ತೆರವುಗೊಳಿಸುವ ನಾಟಕವಾಡಿದ್ದ ಗುತ್ತಿಗೆದಾರ ನಂತರ ನಿರ್ಲಿಪ್ತನಾಗಿ ಅಧಿಕಾರಿಗಳ ದಾರಿ ತಪ್ಪಿಸಿದ್ದರು.
ಮತ್ತೆ ಸುದ್ದಿ ಫಾಲೋ ಅಪ್ ಮಾಡಿದಾಗ ಭವನದಲ್ಲಿ ಸಿಮೆಂಟ್, ಬಿಲ್ಡಿಂಗ್ ಸೆಂಟ್ರಿಂಗ್ ಬಳಸುವ ಕಬ್ಬಿಣದ ಸಾಮಾಗ್ರಿಗಳನ್ನು ಅಲ್ಲಿಯೆ ಇಡಲಾಗಿತ್ತು. ಶನಿವಾರ ಸ್ಥಳಕ್ಕೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಭೇಟಿ ನೀಡಿ ಗುತ್ತಿಗೆದಾರನಿಗೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
ಅಧಿಕಾರಿ ರವಿಚಂದ್ರ ಶನಿವಾರ ಬರುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಬೆಳಿಗ್ಗೆಯೇ ಸಾಮಾಗ್ರಿಗಳನ್ನು ಎತ್ತಂಗಡಿ ಮಾಡಿ ಬೀಗ ಹಾಕದೇ ಪರಾರಿಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿ ದೂರವಾಣಿಯಲ್ಲಿ ಗುತ್ತಿಗೆದಾರ ಸೈಯದ್ ಜಿಲಾನಿ ಅವರನ್ನು ರವಿಚಂದ್ರ ತರಾಟೆಗೆ ತೆಗೆದುಕೊಂಡರು.
ಭವನಕ್ಕೆ ಸುಣ್ಣ, ಬಣ್ಣ ಬಳಿದು ಸ್ವಚ್ಛಗೊಳಿಸಿ. ಒಂದು ವಾರದೊಳಗೆ ಈ ಸಾಂಸ್ಕೃತಿಕ ಭವನವನ್ನು ಕಾರ್ಯಕ್ರಮಗಳಿಗೆ ಮುಕ್ತಗೊಳಿಸುವಂತೆ ಮಾಡಬೇಕು. ಇಲ್ಲವಾದರೆ ಕಸಾಪ ಅಧ್ಯಕ್ಷರಾದ ಸುಜಾತಮ್ಮ ಮತ್ತು ಪಪಂ ಚೀಫ್ ಆಫೀಸರ್ ಮೂಲಕ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಪಪಂ ಸದಸ್ಯ ರಮೇಶ್‍ರೆಡ್ಡಿ, ರಾಯಲ್ಟಿ ಕಟ್ಟದೇ ಬೇಕಾ ಬಿಟ್ಟಿ ಮರಳು, ಜಲ್ಲಿಗಳನ್ನು ಗುತ್ತಿಗೆದಾರ ಹಾಕಿದ್ದಾರೆ. ಹತ್ತು ಲಕ್ಷ ರೂ ವೆಚ್ಚದಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ರಸ್ತೆಯನ್ನು ಹಾಳು ಮಾಡಿರುವ ಗುತ್ತಿಗೆದಾರ ಸೈಯದ್ ಜಿಲಾನಿ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಅವರಿಗೆ ಸೂಚನೆ ನೀಡಿದರು.
ಕಸಾಪ ಬಳಸಿಕೊಳ್ಳದೇ ಕೈಚೆಲ್ಲಿರುವುದು ದುರಾದೃಷ್ಟಕರ
ಇಡಿ ಜಿಲ್ಲೆಯಲ್ಲಿಯೇ ಯಾವ ತಾಲ್ಲೂಕಿನಲ್ಲಿಯೂ ಸಾಂಸ್ಕೃತಿಕ ಭವನ ಇಲ್ಲ. ಜಗಳೂರಿನಲ್ಲಿ ಇರುವುದು ಸಂತೋಷ. ಆದರೆ 2011 ರಲ್ಲಿ ನಿರ್ಮಾಣವಾಗಿದ್ದರೂ ಅದನ್ನು ಕಸಾಪ ಬಳಸಿಕೊಳ್ಳದೇ ಕೈಚೆಲ್ಲಿರುವುದು ದುರಾದೃಷ್ಟಕರ.
ಇನ್ನಾದರೂ ಸಾಂಸ್ಕøತಿಕ ಭವನವನ್ನು ಕನ್ನಡದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಿ ಎಂದು ಕಸಾಪ ಅಧ್ಯಕ್ಷರಾದ ಸುಜಾತಮ್ಮ ಅವರಿಗೆ ರವಿಚಂದ್ರ ಸೂಚನೆ ನೀಡಿದರು.
ಈವೇಳೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ, ಸಾಹಿತಿ ಡಾ.ಪ್ರಭಾಕರ್ ಲಕ್ಕೋಳ್, ಸಾಹಿತ್ಯಾಸ್ಕತರಾದ ಗ್ಯಾಸ್ ಓಬಣ್ಣ, ಕಸಾಪ ಕಾರ್ಯದರ್ಶಿ ಗೀತಾ ಮಂಜು ಸೇರಿದಂತೆ ಅನೇಕರು ಇದ್ದರು.