ಸುದ್ದಿವಿಜಯ, ಜಗಳೂರು: ಬದುಕನ್ನು ಸತ್ಯಪಥದಲ್ಲಿ ಆದರ್ಶಗಳ ಬಲದಿಂದ ಮುನ್ನಡೆಸಬೇಕೆಂಬ ಭಾರತೀಯ ನಂಬಿಯನ್ನು ಉಪನಿಷತ್ತಿನ ಋಷಿಗಳ ಅನಂತದಲ್ಲಿ ಗಟ್ಟಿಗೊಳಿಸಿದ ಮಹಾನ್ ಕೀರ್ತಿ ಶ್ರೀಕೃಷ್ಣನಿಗೆ ಸಲ್ಲುತ್ತದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾಸಮತಿಯಿಂದ ಆಯೋಜಿಸಲಾಗಿದ್ದ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪವಿತ್ರ ಭಾರತದ ಕಲೆ, ಸಾಹಿತ್ಯ, ಆಧ್ಯಾತ್ಮ ಹಾಗೂ ತತ್ವಜ್ಞಾನಗಳಿಗೆ ಶ್ರೀಕೃಷ್ಣನ ದಿವ್ಯ ಬದುಕೇ ಮಹಾನ್ ಪ್ರೇರಣೆ. ಭಗವದ್ಗೀತೆಯನ್ನು ಅತ್ಯುತ್ತಮ ರೀತಿಯಲ್ಲಿ ಜನಸಾಮಾನ್ಯನಿಗೂ ಎಟುಕುವಂತೆ ಪ್ರತಿಪಾದಿಸುವಲ್ಲಿ ಭಗವಾನ್ ಶ್ರೀಕೃಷ್ಣ ಆಲೋಚನೆಯ ಹಿಮಾಲಯವನ್ನೇ ನಮ್ಮ ಮುಂದೆ ಇಡುತ್ತಾನೆ.ಜಗಳೂರಿನ ತಾಲೂಕು ಕಚೇರಿಯಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಭಗವಾನ್ ವಿಷ್ಣುವಿನ ಎಂಟು ಅವತಾರವಾದ ಕೃಷ್ಣನ ಜನ್ಮದಿನದಂದು ಆಚರಿಸಲಾಗುವ ಸಂತೋಷದಾಯಕ ಹಬ್ಬವೇ ಜನ್ಮಾಷ್ಟಮಿ. ಶಿಷ್ಟರ ರಕ್ಷಣೆ ಮತ್ತು ದುಷ್ಟರ ಹರಣ ಮಾಡಿ, ಮಾನವಕುಲದ ಕಲ್ಯಾಣಕ್ಕಾಗಿ ವಿಷ್ಣುವಿನ ಹತ್ತು ಅವತಾರಗಳಲ್ಲೊಂದಾಗಿ, ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿಯ ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ವಸುದೇವ, ದೇವಕಿಯರ ಮಗನಾಗಿ ಭೂಮಿಯ ಮೇಲೆ ಅವತರಿಸಿದವನು ಶ್ರಿಕೃಷ್ಣ. ಆತನನ್ನು ನೆನೆಯುವಾಗ ಸಕಲವು ನಿವಾರಣೆಯಾಗಲಿದೆ ಎಂದರು.
ಜೀವನದುದ್ದಕ್ಕೂ ದೀನ ರಕ್ಷಕ, ಶಿಕ್ಷಕ, ಜ್ಞಾನಿಯಾಗಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮಹಾಭಾರತದ ಯುದ್ದಭೂಮಿಯಲ್ಲಿ ಬೋಧಿಸಿದ ತತ್ವಜ್ಞಾನಗಳಿಂದಾಗಿ ಎಲ್ಲರಿಗೂ ಶ್ರೀಕೃಷ್ಣನ ಮಹತ್ವ ಅರಿಯುವಂತಾಯಿತು ಎಂದು ತಿಳಿಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಶ್ರೀಕೃಷ್ಣ ಅವತಾರ ಪುರುಷನಾಗಿ ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನುಸಂಹರಿಸಿ ನ್ಯಾಯ ಎತ್ತಿ ಹಿಡಿದನು. ಆತನ ನೆನೆಯದ ಮನೆಗಳಿಲ್ಲ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗ್ರೇಡ್- 2 ಮಂಜಾನಂದ, ಯಾದವ ಸಮಾಜದ ತಾಲೂಕಾಧ್ಯಕ್ಷ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್‍ಪಟೇಲ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ,
ಅಲ್ಪ ಸಂಖ್ಯಾತ ಘಟಕದ ತಾಲೂಕಾಧ್ಯಕ್ಷ ಅಹಮದ್ ಅಲಿ, ಯಾದವ ಸಮಾಜದ ಮುಖಂಡರಾದ ಜೀವಣ್ಣ, ಲ್ಯಾಬ್ ಶಿವು, ವೀರೇಶ್, ಕಾಟಪ್ಪ, ಮಹಾಲಿಂಗಪ್ಪ, ಬಡಪ್ಪ, ರಮೇಶ್ ಸೇರಿದಂತೆ ಮತ್ತಿತರಿದ್ದರು.