ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರುವ ಮೂಲಕ ಮಹಿಳೆಯರ ಆರ್ಥಿಕ ಸದೃಢತೆಗೆ ಬುನಾದಿಯಾಗಿದೆ. ಜನಪರ ಕಾಳಜಿ ಹೊಂದಿರುವ ನಮ್ಮ ಸರಕಾರ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಬುಧವಾರ ಪಟ್ಟಣದ ಗುರುಭವನ, ಅಂಬೇಡ್ಕರ್ ಭವನ ಮತ್ತು ಪಪಂ ಕಚೇರಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆ ಪ್ರಚಾರದ ವೇಳೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳ ಭರವಸೆಗಳನ್ನು ನೀಡಲಾಗಿತ್ತು. ಅದರಲ್ಲಿ ನಾಲ್ಕನೇ ಗ್ಯಾರಂಟಿಯಾದ ಗೃಹ ಲಕ್ಷ್ಮಿ ಯೋಜನೆಯನ್ನು ಈಡೇರಿಸಿದ್ದೇವೆ.
ಇಡೀ ದೇಶದಲ್ಲೇ ಯಾವ ಸರಕಾರಗಳು ಜಾರಿಗೆ ತರದ ಜನಪರ ಯೋಜನೆಗಳನ್ನು ನಮ್ಮ ಸರಕಾರ ಅನುಷ್ಠಾನಕ್ಕೆ ತಂದಿದೆ. ಇಡೀ ದೇಶಕ್ಕೆ ನಮ್ಮ ಯೋಜನೆಗಳು ಮಾದರಿಯಾಗಿವೆ. ರಾಜ್ಯದಲ್ಲಿ ಒಂದು ಕೋಟಿ ಹತ್ತು ಲಕ್ಷ ಮಹಿಳೆಯರಿಗೆ ಲಾಭ ಪಡೆಯುತ್ತಿದ್ದಾರೆ.ಜಗಳೂರು ಪಟ್ಟಣದ ಗುರುಭವನದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು
ಶಕ್ತಿ, ಗೃಹಜ್ಯೋತಿ, 10ಕೆಜಿ ಅಕ್ಕಿ ಬದಲಿಗೆ ಹಣವರ್ಗಾವಣೆ ಮತ್ತು ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬನೆಯಿಂದ ಬದುಕಲು ಮುಕ್ತ ಅವಕಾಶವನ್ನು ನಮ್ಮ ಸರಕಾರ ನೀಡಿದೆ.
ನಾವು ನುಡಿದಂತೆ ನಡೆದಿದ್ದೇವೆ.
ಕೇಂದ್ರ ಸರಕಾರ ಮಾಡಿದ ಬೆಲೆ ಏರಿಕೆಯಿಂದ ಮನೆ ನಿರ್ವಹಣೆ ಮಾಡುವುದು ತುಂಬಾ ಕಷ್ಟ. ಸರಕಾರ ಹಣ ನೀಡುತ್ತಿದೆ. ಐದು ಗ್ಯಾರಂಟಿ ಕೊಟ್ಟು ಸ್ವಾವಲಂಭಿಯನ್ನಾಗಿಸಿದೆ. ತಾಲೂಕಿನಲ್ಲಿ 37 ಸಾವಿರ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ತಿಂಗಳಿಗೆ ಏಳು ಕೋಟಿ ರೂ ಹಣ ಮಹಿಳೆಯರ ಖಾತೆಗಳಿಗೆ ಜಮೆಯಾಗುತ್ತದೆ. ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಉತ್ತಮ ಜೀವನ ನಡೆಸಿ ಎಂದರು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅರುಣ್ ಕಾರಗಿ, ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಪಪಂ ಸದಸ್ಯರಾದ ಬಿ.ಕೆ.ರಮೇಶ್‍ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಲುಕ್ಮಾನ್‍ವುಲ್ಲಾ ಖಾನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ದೇವರಾಜ್, ಆರೋಗ್ಯ ನಿರಿಕ್ಷಕ ಕಿಫಾಯತ್ ಅಹಮದ್ ಸೇರಿದಂತೆ ಅನೇಕರು ಇದ್ದರು.