ಜಗಳೂರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ MP ಪ್ರಭಾ ಮಲ್ಲಿಕಾರ್ಜುನ್ ಚಾಲನೆ

Suddivijaya
Suddivijaya August 16, 2024
Updated 2024/08/16 at 12:29 PM

suddivijayanews16/08/2024

ಸುದ್ದಿವಿಜಯ, ಜಗಳೂರು: ತಾಲೂಕಿನ 165 ಗ್ರಾಮಗಳು, ದಾವಣಗೆರೆ ತಾಲೂಕಿನ 20 ಗ್ರಾಮಗಳು ಮತ್ತು ಹರಿಹರ ತಾಲೂಕಿನ 11 ಗ್ರಾಮಗಳೂ ಸೇರಿ ಒಟ್ಟು 196 ಹಳ್ಳಿಗಳಿಗೆ ನಿರಂತರ ಶುದ್ಧ ಕುಡಿಯುವ ನೀರನ್ನು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಶುಕ್ರವಾರ ಚಾಲನೆ ನೀಡಿದರು.

ತಾಲೂಕಿನ ಮಹಾರಾಜನಹಟ್ಟಿ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಮ್ಮ ಸರಕಾರ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದಿಂದ 196 ಹಳ್ಳಿಗಳಿಗೆ ಶುದ್ಧಕುಡಿಯುವ ನೀರನ್ನು ಒದಗಿಸುವ ಈ ಕಾಮಗಾರಿಕೆ 482 ಕೋಟಿ ರೂ ನೀಡಿದೆ.

ಜಗಳೂರು ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಆಗಿದ್ದು ಚುನಾವಣಾ ಪ್ರಚಾರದ ವೇಳೆ ಈ ಕ್ಷೇತ್ರಕ್ಕೆ ಅಗತ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಟ್ಟಿಮಾಡಿ ಭರವಸೆ ನೀಡಿದ್ದೆವು.

ಅದರಂತೆ ಮಹಿಳಾ ಸಬಲೀಕರಣಕ್ಕೆ ಗಾರ್ಮೆಂಟ್ಸ್ ಸ್ಥಾಪನೆ, ಆರೋಗ್ಯ ಕ್ಷೇತ್ರಕ್ಕೆ ಒತ್ತು, ಶುದ್ಧ ಕುಡಿಯುವ ನೀರಿನ ಸೌಕರ್ಯ ಸೇರಿದಂತೆ ಹಂತ ಹಂತವಾಗಿ ನೆರವೇರಿಸಲು ಬದ್ಧವಾಗಿದ್ದೇನೆ ಎಂದರು.

ಜಗಳೂರು ತಾಲೂಕಿನ ಮಹಾರಾಜರಹಟ್ಟಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಸದೆ ಪ್ರಭಾಮಲ್ಲಿಕಾರ್ಜುನ್ ಮತ್ತು ಶಾಸಕ ಬಿ.ದೇವೇಂದ್ರಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ಜಗಳೂರು ತಾಲೂಕಿನ ಮಹಾರಾಜರಹಟ್ಟಿ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಸದೆ ಪ್ರಭಾಮಲ್ಲಿಕಾರ್ಜುನ್ ಮತ್ತು ಶಾಸಕ ಬಿ.ದೇವೇಂದ್ರಪ್ಪ ಶಂಕುಸ್ಥಾಪನೆ ನೆರವೇರಿಸಿದರು.

ಜಗಳೂರು ಕ್ಷೇತ್ರದ ಜನ 9 ಸಾವಿರಕ್ಕೂ ಹೆಚ್ಚು ಲೀಡ್ ಕೊಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ಪಾರ್ಲಿಮೆಂಟ್ ಅನುಭವವೇ ಅದ್ಧುತವಾಗಿದೆ. ಜನರ ಋಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.

ಶಾಸಕ ಬಿ.ದೇವೇಂದ್ರಪ್ಪ, ಹಿಂದ ವರ್ಷ ಬಂದಾಗ ಮಂತ್ರಿಯ ಪತ್ನಿಯಾಗಿ ಬಂದಿದ್ದರು. ಪ್ರಸ್ತುತ ವರ್ಷ ಸಂಸದರಾಗಿ ಬಂದಿದ್ದಾರೆ. 482 ಕೋಟಿ ವೆಚ್ಚದ ಈ ಕಾಮಗಾರಿಯನ್ನು ನೂತನ ಸಂಸದರಿಂದಲೇ ಚಾಲನೆ ನೀಡಬೇಕು ಎಂಬ ಉದ್ದೇಶವಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ದಿನವೇ ಉದ್ಘಾಟನೆಯಾಗಿದ್ದು ಸಂಕಲ್ಪ ಈಡೇರಿದೆ ಎಂದರು.

ತಾಲೂಕಿಗೆ 57 ಕೆರೆ ತುಂಬಿಸುವ ಯೋಜನೆ, ಭದ್ರಾಮೇಲ್ದಂಡೆ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಜೆಜೆಎಂ ಯೋಜನೆಗಳು ಕುಡಿಯುವ ನೀರಿನ ಬವಣೆ ನೀಗಿಸಲು ಸಹಕಾರಿಯಾಗಲಿವೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿ. ಅಭಿವೃದ್ಧಿ ವಿಚಾರದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಸಂಸದರು ನನ್ನ ಎಡ ಮತ್ತು ಬಲ ಗೈನಂತಿದ್ದಾರೆ ಎಂದರು.

ಜಗಳೂರು ಸಮಗ್ರ ಅಭಿವೃದ್ಧಿ

ಎಂಟು ಮಕ್ಕಳನ್ನು ಹೊಂದಿದ ತಾಯಿಗೆ ಎರಡು ಮಕ್ಕಳು ತುರ್ಬಲವಾಗಿರುವುದನ್ನು ಗಮನಿಸಿ ಹೇಗೆ ಆರೈಕೆ ಮಾಡುವತ್ತ ಗಮನ ಹರಿಸುತ್ತಾಳೋ ಹಾಗೆ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಹರಪನಹಳ್ಳಿ,

ಜಗಳೂರು ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ಅವುಗಳ ಕಡೆ ಹೆಚ್ಚು ಗಮನ ಹರಿಸಲು ನಾನು ಪ್ರಾಮಾಣಿಕವಾಗಿ ಗಮನಹರಿಸುತ್ತೇನೆ. ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಸದನದಲ್ಲಿ ಐಟಿ ಬಿಟಿ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ.

ಹರಿಹರದಲ್ಲಿ 5 ಎಕರೆ ಜಾಗ ನಿಗದಿ ಮಾಡಿದ್ದಾರೆ. ಆಸ್ಪತ್ರೆಯ ಸ್ಥಿತಿ ಶೋಚನೀಯವಾಗಿರುವುದನ್ನು ಗಮನಿಸಿದ್ದೇನೆ. ಆದಷ್ಟು ಬೇಗ ಗಮನ ಹರಿಸುತ್ತೇನೆ ಎಂದರು.

ಪಿಡಿಒಗಳಿಗೆ ಎಚ್ಚರಿಕೆ!
ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸದ ಪಿಡಿಒಗಳನ್ನು ಬದಲಾವಣೆ ಮಾಡಲು ಈಗಾಗಲೇ ತೀರ್ಮಾನ ಮಾಡಲು ಚರ್ಚಿಸಲಾಗಿದೆ ಎಂದು ಸಂಸದೆ ಪ್ರಭಾಮಲ್ಲಿಕಾರ್ಜುನ್ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಬಿ.ದೇವೇಂದ್ರಪ್ಪ, ಈಗಾಗಲೇ ಅಂತಹ ಪಿಡಿಒಗಳ ಬಗ್ಗೆ ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರ ಜೊತೆ ಚರ್ಚೆ ಮಾಡಿದ್ದೇನೆ. ಏಕಾ ಏಕಿ ಬದಲಾವಣೆ ಮಾಡಿದರೆ ಇರುವ ಕೆಲಸಗಳು ನಿಲ್ಲುತ್ತವೆ. ಪರಿವರ್ತನೆ ಮೂಲಕ ಕೆಲಸ ತೆಗೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ್ ಸ್ವಾಮಿ, ಜಿಪಂ ಸಿಇಒ ಸುರೇಶ್ ಇಟ್ನಾಳ್, ಬ್ರಾಹ್ಮಣ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ,

ಬಂಜಾರ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಎಇಇ ಸಾದಿಕ್‍ವುಲ್ಲ, ಕಾಂಗ್ರೆಸ್ ಮುಖಂಡರಾದ ಕಲ್ಲೇಶ್‍ರಾಜ್ ಪಟೇಲ್, ಎಂ.ಡಿ.ಕೀರ್ತಿಕುಮಾರ್, ಕೆ.ಪಿ.ಪಾಲಯ್ಯ, ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್, ಷಂಷೀರ್ ಅಹಮದ್ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!