Suddivijaya|Kannada News|20-05-2023
ಸುದ್ದಿವಿಜಯ ಜಗಳೂರು.ಹನ್ನೊಂದು ವರ್ಷಗಳಿಂದಲೂ ಸೂರಿಗಾಗಿ ಹೋರಾಟ ನಡೆಸುತ್ತಿರುವ ಈ ಬಡ ದಲಿತ ಕುಟುಂಬಗಳಿಗೆ ಇಂದಿಗೂ ಗುಡಿಸಲು ಮನೆಯೇ ಗತಿಯಾಗಿದೆ. ಯಾವೊಬ್ಬ ಜನಪ್ರತಿನಿದಿಗಳು ಇವರ ಗೋಳು ಕೇಳುವ ಗೋಜಿಗೆ ಹೋಗಿಲ್ಲ.
ಜಗಳೂರು ತಾಲೂಕಿನ ಪಲ್ಲಾಗಟ್ಟೆಯ ಹೂಸೂರು ಗ್ರಾಮದಲ್ಲಿ 25ಕ್ಕೂ ಹೆಚ್ಚು ಕುಟುಂಬಗಳು ಬುದುಕು ಕಟ್ಟಿಕೊಂಡಿವೆ. ಇಲ್ಲಿ ಓಡಾಡಲು ರಸ್ತೆ ಇಲ್ಲ, ಕುಡಿಯುವ ನೀರಿಲ್ಲ, ಬೀದಿ ದೀಪಗಳಂತೂ ಇಲ್ಲವೇ ಇಲ್ಲ, ಕಾಡು ಪ್ರಾಣಿಗಳಿಗಿಂತಲೂ ಹೀನಾಯವಾಗಿ ಬದುಕುತ್ತಿರುವ ಇವರ ಸ್ಥಿತಿ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ.
ಇಲ್ಲಿ ದಲಿತ ಕುಟುಂಬಗಳೇ ವಾಸಿಸುತ್ತಿವೆ, ಇವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸ್ಥಳಿಯ ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ವಿಫಲವಾಗಿದೆ. ಹನ್ನೊಂದು ವರ್ಷಗಳಿಂದಲೂ 25ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಓಡಾಡಲು ಒಂದು ರಸ್ತೆಯೂ ನೆಟ್ಟಗಿಲ್ಲ, ಎದೆ ಮಟ್ಟ ಬೆಳೆದಿರುವ ಗಿಡ, ಗಂಟೆಗಳಲ್ಲಿಯೇ ಓಡಾಡಬೇಕು, ಮಣ್ಣಿನ ರಸ್ತೆಯೂ ಸಹ ಇಲ್ಲ, ಇನ್ನೂ ಸಿಮೆಂಟ್ ರಸ್ತೆ ಇವರಿಗೆ ಕನಸ್ಸಿನ ಮಾತಾಗಿದೆ.
ಗುಡಿಸಲು ಮನೆ, ಇನ್ನು ಕೆಲವರು ಗಿಲಾವ್ ಇಲ್ಲದ ಸಿಮೆಂಟ್ ಇಟ್ಟಿಗೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮಳೆ ಗಾಲದಲ್ಲಿ ಎಲ್ಲವೂ ಸೋರುತ್ತಿದ್ದು, ರಾತ್ರಿ ವೇಳೆ ಇಡಿ ಕುಟುಂಬಗಳು ನಿದ್ದೆ ಇಲ್ಲದೆ ಜಾಗರಣೆ ಮಾಡಬೇಕಾಗುತ್ತದೆ. ರಾತ್ರಿ ವೇಳೆಯಂತೂ ಭಯ ಮನೆ ಮಾಡಿರುತ್ತದೆ, ಎಲ್ಲಿ ನೋಡಿದರು ಕತ್ತಲು ಆವರಿಸಿರುತ್ತದೆ. ಇಂತಹ ಸ್ಥಿತಿಯಲ್ಲಿರುವ ಇವರಿಗೆ ಬೀದಿ ದೀಪ ಅಳವಡಿಸಿ ಬೆಳಕೂ ನೀಡುವ ಮಾನವೀಯತೆ ಕೂಡ ಇಲ್ಲಿನ ಗ್ರಾಮ ಪಂಚಾಯಿತಿಗೆ ಇಲ್ಲವಾಗಿದೆ.
ಕುಡಿಯುವ ನೀರಿನ ಸಂಪರ್ಕ ಇಲ್ಲ:
ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷವೂ ಕೋಟ್ಯಾಂತರ ರೂ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ ಒಂದು ಕೊಳವೆಬಾವಿ ಕೊರೆಸಿ ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡಬಹುದಿತ್ತು. ಗ್ರಾಮ ಪಂಚಾಯಿತಿ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಮಹಿಳೆಯರು ಕಿ.ಲೋ ಮೀ ದೂರದಿಂದ ಕೊಡದಲ್ಲಿ ಒತ್ತು ನೀರು ತರುವಂತಾಗಿದೆ.
“ ಹಲವು ವರ್ಷಗಳಿಂದ ಇದೆ ಗುಡಿಸಲಿನಲ್ಲಿ ಬದುಕುತ್ತಿದ್ದೇವೆ, ಅನೇಕ ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಬಂದು ಭರವಸೆ ನೀಡಿ ಹೋಗಿದ್ದಾರೆ ಹೊರತು ಇನ್ನು ಕಾರ್ಯರೂಪಕ್ಕೆ ಬಂದಿಲ್ಲ, ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಜೀವನ ನಡೆಸುವುದು ತುಂಬ ಕಷ್ಟವಾಗುತ್ತಿದೆ’
– ಹನುಮಂತಪ್ಪ, ನಿವಾಸಿ
“ ಸ್ವಾತಂತ್ರ ಬಂದು 75 ವರ್ಷಗಳು ಕಳೆದರು ಗ್ರಾಮೀಣ ಪ್ರದೇಶಗಳಲ್ಲಿ ಗುಡಿಸಲು ಮನೆಗಳಲ್ಲಿ ಬಡವರು ಬದುಕುತ್ತಿರುವುದು ಚುನಾಯಿತರಿಗೆ ನಾಚಿಕೆಯಾಗಬೇಕು, ಸೂರು- ನೀರು ಕೊಡುತ್ತೇವೆಂದು ಸುಳ್ಳುಭರವಸೆಗಳು ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು, ಹನ್ನೊಂದು ವರ್ಷಗಳಿಂದಲೂ ಮನೆಗಳಿಲ್ಲದೇ ಗುಡಿಸಲಲ್ಲಿ ಮಕ್ಕಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ”
– ನಿಂಗಪ್ಪ, ರೈತ ಮುಖಂಡ
–