ಸುದ್ದಿ ವಿಜಯ, ಜಗಳೂರು: ಪಟ್ಟಣದ ಕೆನರಾ ಬ್ಯಾಂಕ್ ಬಳಿ ಸೋಮವಾರ ಮಟ ಮಟ ಮಧ್ಯಾಹ್ನವೇ ಕ್ಷಣಾರ್ಧದಲ್ಲೇ ಒಂದು ಲಕ್ಷ ರೂಗಳನ್ನು ಕಳ್ಳರ ಗುಂಪು ಎಗರಿಸಕೊಂಡು ಹೋಗಿರುವ ಘಟನೆ ನಡೆದಿದೆ.
ಜಗಳೂರಿನ ಕೆನರಾ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಿಕೊಂಡು ಬಂದ ಅಫೀಸ್ಉಲ್ಲಾಖಾನ್ ಎಂಬ ವ್ಯಕ್ತಿ ಹಣವಿದ್ದ ಕವರ್ ಅನ್ನು ತನ್ನ ಬೈಕ್ ಹಿಂದಿರುವ ಬ್ಯಾಗ್ನಲ್ಲಿ ಇಟ್ಟು ಕೇವಲ ಹತ್ತು ಅಡಿ ಮುಂದಕ್ಕೆ ಸಾಗಿದ್ದಾರೆ. ಅಷ್ಟರಲ್ಲಿ ಎದುರಾದ ಮೂರುನಾಲ್ಕು ಮಂದಿ ಬೈಕ್ ಸವಾರರು ಕೃತ ಟ್ರಾಫಿಕ್ ಸೃಷ್ಟಿಸಿ ಗಮನ ಬೇರೆಡೆ ಸೆಳೆದು ಬ್ಯಾಗ್ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ಕ್ಷಣಾರ್ಧದಲ್ಲೇ ಲಪಟಾಯಿಸಿದ್ದಾರೆ.
ಹಣ ಕಳೆದುಕೊಂಡ ವ್ಯಕ್ತಿ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ ಹಣದ ಕವರ್ ಮಾಯವಾಗಿತ್ತು. ತಕ್ಷಣವೇ ಬ್ಯಾಂಕ್ಗೆ ಬಂದು ಸಾರ್ವಜನಿಕರನ್ನು ಅವರು ವಿಚಾರಿಸಿದ್ದಾರೆ. ಆದರೆ ಏನೂ ಪ್ರಯೋಜನವಾಗದೇ ಇದ್ದಾಗ ಜಗಳೂರು ಪೊಲೀಸ್ ಠಾಣೆಗೆ ಅವರು ದೂರು ನೀಡಿದರು. ಈ ಕಳ್ಳತನ ಪ್ರಕರಣ ಸಂಬAಧ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಸಿಪಿಐ ಮಂಜುನಾಥ್ ಪಂಡಿತ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಸ್ಥಳದ ಪಂಚನಾಮೆ ಮಾಡಿದರು.
ಸುಳಿವು ನೀಡೀತೆ ಸಿಸಿಟಿವಿ?:
ಬ್ಯಾಂಕ್ ಆವರಣದಲ್ಲಿರುವ ಎಟಿಎಂ ಕೇಂದ್ರಲ್ಲಿ ಸಿಸಿಟವಿ ಅಳವಡಿಸಲಾಗಿದೆ. ಆದರೆ ಅದು ಒಂದು ಬದಿಯಲ್ಲಿರುವ ಕಾರಣ ಬೈಕ್ ಚಲಿಸುವ ದೃಶ್ಯವಷ್ಟೇ ಗೋಚರಿಸುತ್ತಿದೆ. ಆದರೆ ಕಳ್ಳತನ ಮಾಡಿದ ವ್ಯಕ್ತಿಗಳು ಯಾರೆಂಬದು ಅದರಲ್ಲಿ ಗೋಚರಿಸದ ಕಾರಣ ಪೊಲೀಸರು ಆ ಮಾರ್ಗದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪರಿಶೀಲಿಸಿ ನಾನಾ ಆಯಾಮಗಳಲ್ಲೂ ತನಿಖೆ ನಡೆಸಿ ಕಳ್ಳರಿಗೆ ಬಲೆಬೀಸಿದ್ದಾರೆ.