Suddivijaya|Kannada News |08-04-2023
ಸುದ್ದಿವಿಜಯ,ಜಗಳೂರು:ಪಟ್ಟಣದ ನಾಗರೀಕರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವ ಉದ್ದೇಶದಿಂದ ನಿರ್ಮಿಸಿದ್ದ ಮೂರು ಓವರ್ ಹೆಡ್ ಟ್ಯಾಂಕ್‌ಗಳು ನಾಲ್ಕು ವರ್ಷಗಳಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಪಟ್ಟಣ ಪಂಚಾಯಿತಿಯ ನಗರೋತ್ಥಾನ ಯೋಜನೆಯಡಿ ತಲಾ ೧೩ ಲಕ್ಷ ರೂ ವೆಚ್ಚದಲ್ಲಿ ೧.೫ ಲಕ್ಷ ಲೀಟರ್ ಸಾಮರ್ಥ್ಯದ ಮೂರು ಓವರ್ ಹೆಡ್ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ. ೪ನೇ ವಾರ್ಡ್ನ ಮುಸ್ಲಿಂ ಕಾಲನಿ, ೧೮ನೇ ವಾರ್ಡ್ ಅಶ್ವತ್‌ರೆಡ್ಡಿ ನಗರ, ಡಾ.ಬಿ.ಆರ್ ಅಂಬೇಡ್ಕರ್ ಶಾಲೆಯ ಪಕ್ಕದಲ್ಲಿ ತಲೆ ಎತ್ತಿ ನಿಂತಿವೆ. ಆದರೆ ಬಳಕೆಯಾಗದೇ ಅನಾಥವಾಗಿವೆ.
೧೮ ವಾರ್ಡ್ಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ ನೂರಾರು ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಒಂದೆಡೆ ಬೋರ್ ಕೊರೆಸಿ ಆ ನೀರನ್ನು ಓವರ್ ಹೆಡ್ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ನಂತರ ವಾರ್ಡ್ ಗಳಿಗೆನೀರು ಪೂರೈಕೆ ಮಾಡುವ ಉದ್ದೇಶ ಹೊಂದಿತ್ತು. ಇದರಿಂದ ಸ್ವಲ್ಪ ಮಟ್ಟಿಗೆ ನೀರಿನ ಬವಣೆ ನೀಗಿಸಬಹುದು ಎಂಬ ಲೆಕ್ಕಚಾರ ಅಧಿಕಾರಿಗದ್ದಾಗಿತ್ತು.
ಹಾಗಾಗಿಯೇ ೨೦೧೮-೧೯ ರಲ್ಲಿ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಯಿತು. ಆದರೆ ಕಟ್ಟಡ ಕಾಮಗಾರಿಯೂ ಕೂಡ ಆಮೇಗತಿಯಲ್ಲಿ ಸಾಗಿದ್ದರಿಂದ ನಿಗದಿತ ವೇಳೆಗೆ ಉದ್ಘಾಟನೆಯಾಗಲಿಲ್ಲ.
ಮೂರು ಟ್ಯಾಂಕರ್‌ಗಳಿಂದ ಸುಮಾರು ೩೯ ಲಕ್ಷ ರೂಗಳನ್ನು ಬಳಕೆ ಮಾಡಲಾಗಿದೆ. ಅದನ್ನು ಲೋಕಾರ್ಪಣೆ ಮಾಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ತಕ್ಕು ಹಿಡಿಯುತ್ತಿರುವ ಪೈಪ್‌ಗಳು:
ಓವರ್‌ಹೆಡ್ ಟ್ಯಾಂಕ್‌ಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಬಳಕೆಯಾಗದೇ ನಾಲ್ಕು ವರ್ಷಗಳಿಂದಲೂ ಕುಡಿಯುವ ನೀರಿನ ಕಬ್ಬಿಣದ ಪೈಪ್‌ಗಳೆಲ್ಲಾ ತುಕ್ಕು ಹಿಡಿದು ಮೇಲ್ಭಾಗದ ಪದರ ಎದ್ದಿದೆ. ಇದು ಹೀಗೆ ನಿರುಪಯುಕ್ತವಾದರೆ ಒಂದಿಲ್ಲಾ ಒಂದು ದಿನ ಅಪಾಯ ಎದುರಾಗುವ ಸಾದ್ಯತೆ ಇದೆ ಎನ್ನುತ್ತಾರೆ ನಿವಾಸಿಗಳು.
ಬಾರದ ಸೂಳೆ ಕೆರೆ ನೀರು:
ಫ್ಲೋರೈಡ್‌ಯುಕ್ತ ನೀರು ಕುಡಿದು ಜನರೇಲ್ಲಾ ಅನೇಕ ರೋಗಗಳಿಗೆ ತುತ್ತಾಗುತ್ತಿರುವುದನ್ನು ಮನಗಂಡ ಮಾಜಿ ಶಾಸಕ ಟಿ. ಗುರುಸಿದ್ದನಗೌಡರು ತಮ್ಮ ಅವದಿಯಲ್ಲಿ ಚನ್ನಗಿರಿ ತಾಲೂಕಿನ ಶಾಂತಿ ಸಾಗರದಿಂದ ಪೈಪ್‌ಲೈನ್ ಮೂಲಕ ನೀರು ತಂದು ಜನರಿಗೆ ಹೊಳೆ ನೀರು ಕೊಟ್ಟಿದ್ದರು. ಕೆಲ ವರ್ಷಗಳು ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆಗುತ್ತಿತ್ತು. ಕೆಲವೇ ವರ್ಷಗಳಿಂದ ಜಗಳೂರಿಗೆ ಸೂಳೆಕೆರೆ ನೀರು ಕನಸ್ಸಿನ ಮಾತಾಗಿದೆ. ಅತ್ತ ಸೂಳೆ ಕೆರೆ ನೀರು ಇಲ್ಲ. ಇತ್ತ ಬೋರ್‌ವೆಲ್ ಗಳಿಂದಲೂ ಸರಿಯಾಗಿ ಪೂರೈಕೆಗದೇ ವಾರ್ಡ್ಗಳ ಜನರು ಅಧಿಕಾರಿಗಳ ಮತ್ತು ಜನಪ್ರತಿನಿಗಳ ವಿರುದ್ದ ಹಿಡಿ ಶಾಪ ಹಾಕುತ್ತಿದ್ದಾರೆ.
“ನಾಲ್ಕೈದು ವರ್ಷಗಳ ಹಿಂದೆ ಟ್ಯಾಂಕ್‌ಗಳು ನಿರ್ಮಾಣವಾಗಿವೆ. ಅದನ್ನು ಕಾರ್ಯರೂಪಕ್ಕೆ ತರಬೇಕಿದ್ದ ಅಧಿಕಾರಿಗಳೇ ಕೈಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಎಲ್ಲವನ್ನು ಸರಿಪಡಿಸಲಾಗುವುದು. ಕರ್ನಾಟಕ ನೀರು ಸಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಬಂದು ಸರ್ವೇ ಮಾಡಿ ಎಲ್ಲಾ ವಾರ್ಡ್ಗಳ ಕ್ರಿಯಾ ಯೋಜನೆ ಮಾಡಿಕೊಂಡು ಹೋಗಿದ್ದಾರೆ. ಬಾಕಿ ಇರುವ ಪೈಪ್‌ಲೈನ್ ಮತ್ತು ವಾಲ್‌ಗಳನ್ನು ದುರಸ್ಥಿ ಪಡಿಸಲಾಗಿದೆ. ಪ್ರತಿ ವಾರ್ಡ್ಗಳಲ್ಲೂ ಪೈಪ್ ಮೂಲಕ ಜನರಿಗೆ ನೀರು ಕೊಡುವ ಸಿದ್ದತೆ ಮಾಡಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.”
– ಲೋಕ್ಯನಾಯ್ಕ, ಮುಖ್ಯಾಧಿಕಾರಿ ಪ.ಪಂ ಜಗಳೂರು.
“ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಟ್ಯಾಂಕ್‌ಗಳು ನೆನಗುದಿಗೆ ಬಿದ್ದಿವೆ. ಸಣ್ಣ ಪುಟ್ಟ ಕೆಲಸಗಳಿದ್ದ ಅವುಗಳನ್ನು ಸರಿಪಡಿಸಿ ಲೋಕಾರ್ಪಣೆ ಮಾಡದೇ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹೇಳಿಕೊಂಡು ನಾಲ್ಕು ವರ್ಷ ಕಳೆದಿದ್ದಾರೆ. ಈಗಲೂ ಚಾಲನೆ ಸಿಕ್ಕಿಲ್ಲ. ಈ ಟ್ಯಾಂಕ್‌ಗಳಿAದ ೧೦ ವಾರ್ಡ್ಗಳ ನಿವಾಸಿಗಳಿಗೆ ತುಂಬ ಅನುಕೂಲವಾಗುತ್ತದೆ. ಕೂಡಲೇ ಲೋಕಾರ್ಪಣೆ ಮಾಡಲು ಅಧಿಕಾರಿಗಳು ಮುಂದಾಗಬೇಕು”
– ರಮೇಶ್, ಸದಸ್ಯರು. ಪ.ಪಂ
“ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರು ತುಂಬಿಸಿ ವಾರ್ಡ್ಗಳಿಗೆ ಪೂರೈಕೆ ಮಾಡಲಾಗದೇ ಕುಂಟು ನೆಪ ಹೇಳಿಕೊಂಡು ದಿನದೂಡಿದ್ದಾರೆ. ಟ್ಯಾಂಕ್‌ಗಳ ಮೂಲಕ ನೀರು ಬಿಡುವುದರಿಂದ ವಾರ್ಡ್ಗಳಲ್ಲಿ ಮಹಿಳೆಯರು ಬಿಂದಿಗೆ ಹೋರುವುದು ಕಡಿಮೆಯಾಗುತ್ತದೆ. ನೀರಿಗಾಗಿಯೇ ದಿನವಿಡಿ ಕಾಯಬೇಕು. ಕುಡಿಯುವ ನೀರಿಗಾಗಿಯೇ ಸರ್ಕಾರ ಪಟ್ಟಣ ಪಂಚಾಯಿತಿಗೆ ಕೋಟ್ಯಾಂತರ ರೂಗಳನ್ನು ಮಂಜೂರು ಮಾಡುತ್ತದೆ. ಆದರೆ ದುರ್ಬಳೆಯಾಗುತ್ತಿದೆ”
– ನಾಗರಾಜ್, ನಿವಾಸಿ