ಸುದ್ದಿವಿಜಯ, ಲಿಂಗಸುಗೂರು: ಕ್ಷೇತ್ರದ ಹಾಲಿ ಶಾಸಕರಾದ ಡಿ.ಎಸ್. ಹುಲಿಗೇರಿ ಅವರು ಟಿಕೆಟ್ ಸಿಗದಿದ್ದರೆ ಅನ್ಯಪಕ್ಷದಿಂದ ಸ್ಪರ್ಧಿಸುವುದಾಗಿ ಮಾಧ್ಯಮಗಳಿಗೆ ಬಹಿರಂಗವಾಗಿ ಹೇಳಿದ್ದು, ಈ ಮೂಲಕ ಟಿಕೆಟ್ ಸಿಗುವ ಬಗ್ಗೆ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಹಟ್ಟಿ ಸಮೀಪದ ಜೋಗೇರದೊಡ್ಡಿ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವಾಗ ಹುಲಿಗೇರಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಈ ಮಹತ್ವದ ಬೆಳವಣಿಗೆಯೊಂದಿಗೆ ಲಿಂಗಸುಗೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ವಿಷಯ ಸ್ವಾರಸ್ಯಕರವಾದ ತಿರುವು ಪಡೆದುಕೊಂಡಿದೆ. ಈಗಾಗಲೇ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿರುವ ನಿವೃತ್ತ ಇಂಜಿನಿಯರ್ ಆರ್. ರುದ್ರಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಹುಲಿಗೇರಿ ಅವರ ಬಗ್ಗೆ ಜನ ಹಾಗೂ ಪಕ್ಷದ ನಾಯಕರು, ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎಂದು ಈಗಾಗಲೇ ಹಲವು ವರದಿಗಳು ಹೇಳುತ್ತಿದ್ದು, ಈ ಬಾರಿ ರುದ್ರಯ್ಯ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳು ದಟ್ಟೈಸುತ್ತಿವೆ.
ಮೀಸಲು ಕ್ಷೇತ್ರವಾದ ಲಿಂಗಸುಗೂರಿನಲ್ಲಿ ಪರಿಶಿಷ್ಟ ಎಡ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಎಚ್.ಬಿ. ಮುರಾರಿ ಅವರು ಒತ್ತಡ ಹೇರುತ್ತಿದ್ದು ಗೆಲ್ಲುವ ಸಾಧ್ಯತೆ ಇದೆಯೇ ಇಲ್ಲವೋ ಎಂಬುದನ್ನು ಹೈ ಕಮಾಡ್ ಲೆಕ್ಕ ಹಾಕುತ್ತಿದೆ.
ಎಲ್ಲಾ ಅಂದುಕೊಂಡಂತೆ ಆದರೆ ಇನ್ನು ಎರಡು ವಾರಗಳಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದ್ದು, ಲಿಂಗಸುಗೂರು ಕ್ಷೇತ್ರದಲ್ಲಿ ಹಾಲಿ ಎಂಎಲ್‌ಎ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇರುವ ಕಾರಣ ಮೊದಲ ಪಟ್ಟಿಯಲ್ಲಿ ಲಿಂಗಸುಗೂರು ಕ್ಷೇತ್ರವನ್ನು ಕೈ ಬಿಡುವ ಸಾಧ್ಯತೆಯೂ ಇದೆ.