ಸುದ್ದಿವಿಜಯ, ರಾಣೇಬೆನ್ನೂರು: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಪ್ರಕಾಶ್ ಕೋಳಿವಾಡ ಅವರ ‘ಬಯೋಡೇಟಾ ಕೊಡಿ, ಕೆಲಸ ತಗೋಳಿ’ ಉದ್ಯೋಗ ಅಭಿಯಾನದಲ್ಲಿ 10 ಸಾವಿರಕ್ಕೂ ಹೆಚ್ಚು ಯುವಕರು ನೋಂದಾಯಿಸಿಕೊಂಡಿದ್ದಾರೆ. ಅವರ ತಂಡವು ಒಂದು ತಿಂಗಳ ಕಾಲ ಮನೆ ಮನೆಗೆ ತೆರಳಿ, ಪ್ರಚಾರದ ಮೂಲಕ ಉದ್ಯೋಗ ಆಕಾಂಕ್ಷಿಗಳ ಸ್ವವಿವರಗಳನ್ನು ಸಂಗ್ರಹಿಸಿದೆ.
“ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ ಒಂದು ತಿಂಗಳಲ್ಲಿ 10,741 ಜನರು ನಮ್ಮ ಉದ್ಯೋಗ ಅಭಿಯಾನ ‘ಬಯೋಡೇಟಾ ಕೊಡಿ, ಕೆಲಸ ತಗೋಳಿ’ಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಆಕಾಂಕ್ಷಿಗಳಲ್ಲಿ ಪ್ರತಿಯೊಬ್ಬರಿಗೂ ಯೋಗ್ಯವಾದ ಸಂಬಳದ ಉದ್ಯೋಗವನ್ನು ಒದಗಿಸುವ ವಿಶ್ವಾಸವಿದೆ, ಇದರಿಂದ ಅವರು ಉತ್ತಮ ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ” ಎಂದು ಪ್ರಕಾಶ್ ಕೋಳಿವಾಡ ಅವರು ಶನಿವಾರ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು. ಮುಂದಿನ ಐದು ವರ್ಷಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಉದ್ದೇಶವಿದೆ ಎಂದು ಅವರು ತಿಳಿಸಿದರು.
“ನಾವು ಇನ್ಕ್ಯು ಬೇಶನ್ ಸೆಂಟರ್ ಅನ್ನು ಸ್ಥಾಪಿಸಿ ಅರ್ಜಿದಾರರಿಗೆ ಉದ್ಯೋಗ-ನಿರ್ದಿಷ್ಟ ತರಬೇತಿಯನ್ನು ನೀಡುತ್ತೇವೆ. ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರವು ಉದ್ಯೋಗವನ್ನು ಹುಡುಕುತ್ತಿರುವ ಆಕಾಂಕ್ಷಿಗಳಲ್ಲಿ ಅತ್ಯಂತ ಜನಪ್ರಿಯ ವಿಭಾಗವಾಗಿದೆ. ಅದರ ನಂತರ ಉತ್ಪಾದನಾ ವಲಯ, ಜವಳಿ, ಹಣಕಾಸು ಸೇವೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಆಟೋಮೊಬೈಲ್‌ಗಳು ಸೇರಿವೆ” ಎಂದು ಪ್ರಕಾಶ್ ಕೋಳಿವಾಡ ಅವರು ನೋಂದಾಯಿತ ಯುವಕರ ವಿವರಗಳನ್ನು ತಿಳಿಸಿದರು.
“18 ರಿಂದ 25 ವರ್ಷ ವಯಸ್ಸಿನ ಯುವಕರಿಂದ ಹೆಚ್ಚಿನ ಅರ್ಜಿಗಳು ಬಂದಿವೆ, ಅವರು ಹೊಸದಾಗಿ ಕಾಲೇಜುಗಳಿಂದ ಪದವಿ ಪಡೆದಿದ್ದಾರೆ. ಉದ್ಯೋಗ ಒದಗಿಸುವ ದೊಡ್ಡ ಕಂಪನಿಗಳನ್ನು ಇಲ್ಲಿಗೆ ಆಹ್ವಾನಿಸಲು ಅನುಕೂಲವಾಗುವಂತೆ ನೋಂದಾಯಿತ ಎಲ್ಲ ಯುವಕರ ಶಿಕ್ಷಣದ ಮಟ್ಟವನ್ನು ನಾವು ಮ್ಯಾಪ್ ಮಾಡಿದ್ದೇವೆ,” ಎಂದಿರುವ ಪ್ರಕಾಶ್ ಕೋಳಿವಾಡ ಅವರು, ಶೇ.27ರಷ್ಟು ಅರ್ಜಿದಾರರು 26ರಿಂದ 35 ವರ್ಷದೊಳಗಿನವರಾಗಿದ್ದು, ಶೇ.10ರಷ್ಟು 35 ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ ಎಂದು ತಿಳಿಸಿದ್ದಾರೆ.
“ಇಂತಹ ಹೆಚ್ಚಿನ ಸಂಖ್ಯೆಯ ನೋಂದಣಿಗಳಿಂದಾಗಿ ನಮ್ಮ ಪ್ರದೇಶದಲ್ಲಿನ ನಿರುದ್ಯೋಗದ ನೈಜ ಚಿತ್ರಣ ತಿಳಿಯುತ್ತದೆ. ಪ್ರಸ್ತುತ ಬಿಜೆಪಿ ಆಡಳಿತದ ಆದ್ಯತೆಗಳು ಸಂಪೂರ್ಣವಾಗಿ ತಪ್ಪಾಗಿದ್ದು, ನಮ್ಮ ಯುವಜನರ ಭವಿಷ್ಯದ ಬಗ್ಗೆ ಅವರಿಗೆ ಕಾಳಜಿಯಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ” ಎಂದ ಪ್ರಕಾಶ್ ಕೋಳಿವಾಡ ಅವರು ರಾಣೇಬೆನ್ನೂರಿನ ಜನರ ಜೀವನವನ್ನು ಸುಧಾರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಪ್ರತಿಪಾದಿಸಿದರು.
ಬೃಹತ್ ಅಭಿಯಾನದ ಬಗ್ಗೆ ವಿವರಗಳನ್ನು ತಿಳಿಸಿದ ಪ್ರಕಾಶ್ ಕೋಳಿವಾಡ, ನಿರುದ್ಯೋಗಿ ಯುವಕರ ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿಪರ ಪರಿಣತಿಗೆ ಅನುಗುಣವಾಗಿ ಉದ್ಯೋಗಗಳನ್ನು ಕಲ್ಪಿಸಲು ತಮ್ಮ ತಂಡವು ರಾಣೆಬೆನ್ನೂರಿನ ಪ್ರತಿಯೊಂದು ಮನೆಗಳ ಬಾಗಿಲಿಗೆ ಎಡತಾಕಿದೆ ಎಂದು ಹೇಳಿದರು. ಪ್ರಕಾಶ್ ಕೋಳಿವಾಡ ಅವರು ಕಳೆದ ಹತ್ತು ವರ್ಷಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ಒದಗಿಸಿದ್ದು ಇದರಿಂದಾಗಿ ರಾಣೆಬೆನ್ನೂರಿನ ಜನರು ಅವರ ಮೇಲೆ ಅಪಾರ ಭರವಸೆ ಇರಿಸಿದ್ದಾರೆ.