ಜಗಳೂರು ತಾಲೂಕು ಗೋಪಾಲಪುರದಲ್ಲಿ ಗ್ರಾಮವಾಸ್ಯವ್ಯ, ಜನರ ಸಮಸ್ಯೆ ಆಲಿಸಿದ ಅಧಿಕಾರಿಗಳು.

Suddivijaya
Suddivijaya December 2, 2022
Updated 2022/12/03 at 7:31 AM

ಸುದ್ದಿವಿಜಯ ಜಗಳೂರು.ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಎಲ್ಲರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ತಾಲೂಕಾಡಳಿತ ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ ಸಹಾಯೋಗದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕಮದಡಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಪ್ರತಿ ಹಳ್ಳಿಗಳಲ್ಲಿರುವ ಕುಂದು –ಕೊರತೆಗಳನ್ನು ಪರಿಶೀಲಿಸಿ, ಗ್ರಾಮ ವಾಸ್ತವ್ಯದ ಮೂಲಕ ಸಾದ್ಯವಾದಷ್ಟು ಸಮಸ್ಯೆಗಳನ್ನು ದೂರ ಮಾಡುವ ಕೆಲಸವನ್ನು ತಾಲೂಕು ಆಡಳಿತ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಜನರು ನಗರ,ಪಟ್ಟಣಗಳಿಗೆ ಬಂದು ಕಚೇರಿಗಳಲ್ಲಿ ತಮ್ಮ ಕೆಲಸಕಾರ್ಯಗಳನ್ನು ಮಾಡಿಕೊಳ್ಳಲು ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ತೆರಳುವಂತಹ ಕಾರ್ಯಕ್ರಮವನ್ನು ನಡೆಸುತ್ತಿದೆ ಇದರಿಂದ ಅನೇಕಾರು ಸಮಸ್ಯೆಗಳು ಕಡಿಮೆಯಾಗುತ್ತಿವೆ ಎಂದರು.

ಸರ್ಕಾರಿ ಶಾಲೆಜಾಗಕ್ಕೆ ಕೈ ಹಾಕುವಂತಿಲ್ಲ:
ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಜಾಗ ತಮ್ಮದೆಂದು ಕೆಲವರು ತಕಾರರು ಎತ್ತಿರುವುದು ಗಮನಕ್ಕೆ ಬಂದಿದೆ. ಸಮಸ್ಯೆ ಏನೇ ಇದ್ದರೂ ನನ್ನೊಂದಿಗೆ ನೇರವಾಗಿ ಬಂದು ಮಾತನಾಡಲೀ, ಅದು ಬಿಟ್ಟು ಮಕ್ಕಳು ಓದುವ ಸರ್ಕಾರಿ ಶಾಲೆಯನ್ನು ಬೀಗ ಹಾಕುವುದು, ಅಡ್ಡಿ ಪಡಿಸುವುದು ಮಾಡಿದರೆ ನಾನು ಸುಮ್ಮನಿರುವುದಿಲ್ಲ. ಶಾಲೆಯ ಜಾಗವನ್ನು ಯಾರು ಮುಟ್ಟುವಂತಿಲ್ಲ ಎಂದು ಶಾಸಕ ಎಚ್ಚರಿಕೆ ನೀಡಿದರು.

ಜಗಳೂರಿಗೆ ಹೆಣ್ಣು ಕೊಡಲು ಹಿಂಜರಿಕೆ‌‌ ಬೇಡ:

“ಕೆಲ ವರ್ಷಗಳ ಹಿಂದೆ ಜಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರಗಾಲದಿಂದ ಕೂಡಿತ್ತು ಹಾಗಾಗಿ ಈ ಊರಿಗೆ ಹೆಣ್ಣು ಕೊಡಲು ಬೇರೆ ತಾಲೂಕಿನವರು ಹಿಂಜರಿಯುತ್ತಿದ್ದರು. ಆದರೆ ಈಗ ೫೭ಕೆರೆ ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಜಲಜೀವನ್ ಮೀಷನ್ ಯೋಜನೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಜಗಳೂರು ನೀರಾವರಿ ಪ್ರದೇಶವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ”

ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.

ಗ್ರಾಮ ಸಂಚಾರ:

ಕಾರ್ಯಕ್ರಮಕ್ಕೂ ಮುನ್ನ ಗ್ರಾಮಕ್ಕಾಗಮಿಸಿದ ತಹಸೀಲ್ದಾರ್ ಸಂತೋಷ್ ಕುಮಾರ್ ಹಾಗೂ ವಿವಿಧ ಅಧಿಕಾರಿಗಳ ತಂಡ ದಲಿತ ಕೇರಿ ಸೇರಿದಂತೆ ವಿವಿಧ ಬೀದಿ ಬೀದಿಗಳಲ್ಲಿ ಸಂಚರಿಸಿ ವಾಸ್ತವ ಸ್ಥಿತಿಯ ಬಗ್ಗೆ ಪರಿಶೀಲಿಸಿದರು.

ವಿಧವಾ ವೇತನ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆ ವಿವಿಧ ಸೌಲಭ್ಯಗಳು ಸರಿಯಾಗಿ ತಲುಪುತ್ತಿವೆಯಾ ಎಂದು ಗ್ರಾಮಸ್ಥರನ್ನು ಪ್ರಶ್ನಿಸಿದರು. ಕೆಲವೊಮ್ಮೆ ತುಂಬ ತಡವಾಗಿ ಬರುತ್ತದೆ ಎಂದು ವೃದ್ದ ಮಹಿಳೆಯರು ಗಮನಕ್ಕೆ ತಂದರು. ಯಾವ ಭಯ ಬೇಡ ಎಲ್ಲವನ್ನು ಸರಿಪಡಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.

ವಿದ್ಯುತ್ ಕಂಬ ಅಳವಡಿಸಲು ಒತ್ತಾಯ:
ಗ್ರಾಮದಲ್ಲಿ ಈವರೆಗೂ ಕೆಲವೇ ವಿದ್ಯುತ್ ಕಂಬಗಳಿವೆ, ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ತುಂಬ ತೊಂದರೆ ಅನುಭವಿಸುವಂತಾಗಿದೆ. ಬಹುತೇಕ ಬೀದಿಗಳಲ್ಲಿ ವಿದ್ಯುತ್ ಕಂಬಗಳಿಲ್ಲ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ತಕ್ಷಣವೇ ವಿದ್ಯುತ್ ಕಂಬ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ಬೆಸ್ಕಾಂ ಎಇಇ ಗಿರೀಶ್ ನಾಯ್ಕ ಪ್ರತಿಕ್ರಿತಿಸಿ, ಅನೇಕ ವರ್ಷಗಳಿಂದಲೂ ಈ ಸಮಸ್ಯೆ ಇದೆ. ಈಗಾಗಲೇ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಶೀಘ್ರವೇ ವಿದ್ಯುತ್ ಕಂಬ ಮತ್ತು ತಂತಿಲೈನ್ ಹಾಕಲಾಗುವುದು, ಅಲ್ಲದೇ ವಿದ್ಯುತ್‌ನೊಂದಿಗೆ ನಿರ್ಲಕ್ಷ ತೋರಬೇಡಿ, ಸಣ್ಣ ಬೇಜವಾಬ್ದಾರಿಯಿಂದ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಚ್ಚರಿಕೆ ವಹಿಸಬೇಕು ಎಂದರು.

ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಯಡಿ ಸಿಗಬೇಕಾದ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಬೇಕು, ಯಾರು ಇದರಿಂದ ವಂಚಿತರಾಗಬಾರದು ಎಂದು ಸಲಹೆ ನೀಡಿದರು. ಎಂದರು.

ಗ್ರಾ.ಪಂ  ಸದಸ್ಯ ಹನುಮಂತಪ್ಪ ಮಾತನಾಡಿ, ಗೋಪಾಲಪುರ ಕುಗ್ರಾಮವಾಗಿದ್ದು ಸಾರಿಗೆ ಸೌಲಭ್ಯವಿಲ್ಲ, ಚರಂಡಿಗಳಿಲ್ಲ, ಸಿಸಿ ರಸ್ತೆ ನಿರ್ಮಾಣ ಅಗತ್ಯವಾಗಿದೆ. ಅಲ್ಲದೇ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಅಧಿಕಾರಿಗಳು ಗಮನಹರಿಸಬೇಕು ಎಂದು ಮನವಿ ಮಾಡಿದರು.
ತಾ.ಪಂ ಇಒ ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ತೋಟಗಾರಿಕಾ ಸಹಾಯಕ ನಿರ್ದೇಶಕ ವೆಂಕಟೇಶ್‌ಮೂರ್ತಿ,ಕೃಷಿ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಲಿಂಗರಾಜ್, ಲೋಕೋಪಯೋಗಿ ಇಲಾಖೆ ಎಇ ಪ್ರಭು, ಮೀನುಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ್ ಇಲಾಖೆಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮಂಜಪ್ಪ, ಸಿದ್ದೇಶ, ತಿರುಮಲ, ಕೆ. ರಾಜಪ್ಪ, ಚೌಡಮ್ಮ, ಮುರುಗಪ್ಪ, ಗೋವಿಂದಪ್ಪ, ಪಿಡಿಒ ಶಿವಕುಮಾರ್ ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!