ಸುದ್ದಿವಿಜಯ ಜಗಳೂರು. ದೇಶದ ಯುವಕರನ್ನು ಮುನ್ನಡೆಸುವ ಶಕ್ತಿ ಗುರುಗಳಲ್ಲಿದೆ ಆದರೆ ಇದರಲ್ಲಿ ರಾಜಕೀಯ ಬೆರೆಯಬಾರದು ಎಂದು ದೇವಿಕೆರೆ ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಗೌಸ್ಮನ್ಸೂರ್ ಅಭಿಪ್ರಾಯಪಟ್ಟರು.
ಜಗಳೂರು ತಾಲೂಕಿನ ದೇವಿಕೆರೆ ಸರ್ಕಾರಿ ಹಿರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಣ ಸಾರಥಿ ಪ್ರಶಸ್ತಿ ಪಡೆದ ಆಂಜನೇಯ ಅವರಿಗೆ ಸನ್ಮಾನ ಹಾಗೂ ನಿವೃತ್ತಿಗೊಂಡ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿಕ್ಷಕರು ಭಾಗ್ಯವಂತರು, ಆರಂಭದಿಂದ ನಿವೃತ್ತಿಯವರೆಗೂ ಸಾವಿರಾರು ಮಕ್ಕಳಿಗೆ ಅಕ್ಷರ ಜ್ಞಾನ ಹೇಳಿಕೊಟ್ಟು ಸಮಾಜದಲ್ಲಿ ಸಂಸ್ಕಾರವಂತರನ್ನಾಗಿ ಮಾಡುತ್ತೇವೆ. ಗುರುಗಳು ಮಾತಿಗೆ ಗೌರವ ಕೊಟ್ಟು ಚನ್ನಾಗಿ ಓದಿ ಉನ್ನತ ಸ್ಥಾನದಲ್ಲಿ ಹುದ್ದೆ ಪಡೆದು ಮುಂದೆ ಬರುವ ಮಕ್ಕಳನ್ನು ಕಂಡಾಗ ಸ್ವರ್ಗವೇ ತೆರೆದಂತಾಗುತ್ತದೆ ಎಂದರು.
ನನ್ನ 32 ವರ್ಷಗಳ ಕಾಲ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ, ಮಂಗಳೂರು ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 1990ನೇ ಸಾಲಿನಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ. ದೇವಿಕೆರೆ ಶಾಲೆಯಲ್ಲಿ ಸುದೀರ್ಘವಾಗಿ 28 ವರ್ಷಗಳ ಸೇವಾಧಿಯಲ್ಲಿ ನಮ್ಮ ಶಿಕ್ಷಕರುಗಳ, ಗ್ರಾಮದ ಜನರ ಹಾಗೂ ಶಿಕ್ಷಣ ಇಲಾಖೆಯ ಸಹಕಾರದಿಂದ ಶಿಕ್ಷಕನಾಗಿ ಉತ್ತಮ ಸೇವೆ ಸಲ್ಲಿಸಿದ್ದೇನೆ ಎಂದರು.
ದೇವಿಕೆರೆ ಕ್ಲಸ್ಟರ್ನ ಸಿ.ಆರ್.ಪಿ. ಇ. ಆಂಜಿನೇಯ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇವಿಕೆರೆ ಕ್ಲಸ್ಟರ್ನ ಎಲ್ಲಾ ಶಿಕ್ಷಕರ, ಶಿಕ್ಷಣ ಇಲಾಖೆಯ ಸಹಕಾರದಿಂದ ಉತ್ತಮವಾಗಿ ಸೇವೆ ಸಲ್ಲಿಸಿದ ನನಗೆ ರಾಜ್ಯ ಮಟ್ಟದಲ್ಲಿ ನೀಡುವ ಶಿಕ್ಷಣ ಸಾರಥಿ ಪ್ರಶಸ್ತಿ ಲಭಿಸಿದ್ದು, ಕೆಲಸ ಮಾಡಲು ಮತ್ತೊಷ್ಟು ಸ್ಪೂರ್ತಿ ನೀಡಿದೆ. ಅದಲ್ಲದೇ ದೇವಿಕೆರೆ ಶಾಲೆಯ ಮುಖ್ಯಶಿಕ್ಷಕರಾದ ಗೌಸ್ ಮನ್ಸೂರ್ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಸೇವೆ ಸಲ್ಲಿಸಿ ಇಂದು ನಿವೃತ್ತ ಹೊಂದಿದ್ದು, ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಆರೈಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕ ಕೆ.ಬಸವರಾಜಪ್ಪ, ಶಿಕ್ಷಕರಾದ ಎಂ.ಮಂಜುಳಾ, ಎಸ್.ಬಸಮ್ಮ, ಎಸ್.ಮಂಜುಳಾ, ಆರ್.ಎಚ್.ಮಂಜುಳಾ, ಎಮ.ಬಿ. ಮನ್ಸೂರು, ಅಡಿಗೆ ಸಿಬ್ಬಂದಿಗಳಾದ ವೀರಮ್ಮ, ಶೇಖಮ್ಮ, ಶಿಲ್ಪ ಸೇರಿದಂತೆ ಇತರರು ಇದ್ದರು.