ಸುದ್ದಿವಿಜಯ,ಜಗಳೂರು: ದೇಶದ ಅಸ್ಮಿತೆಯ ಪ್ರತೀಕವಾಗಿರುವ ತ್ರಿವರ್ಣ ಧ್ವಜವನ್ನು ತಾಲೂಕಿನ ಮುಸ್ಟೂರು ಗ್ರಾಪಂ ಅಧ್ಯಕ್ಷರಾದ ಶ್ರುತಿ ಪ್ರಕಾಶ್ ಅವಮಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇಡೀ ದೇಶದಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಎಲ್ಲಾ ಸರಕಾರಿ ಕಚೇರಿಗಳು ಸಂಘ ಸಂಸ್ಥೆಗಳು, ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ರಾಜ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆದೇಶ ಹೊರಡಿಸಿದೆ.
ಸರಕಾರದ ಆದೇಶದಂತೆ ಪ್ರತಿ ಮನೆ ಮನೆಗಳಿಗೆ ಸ್ಥಳೀಯ ಆಡಳಿತದಿಂದ ಧ್ವಜ ವಿತರಣೆ ಮಾಡುವಂತೆ ಆದೇಶ ಬಂದಿದೆ. ಹೀಗಾಗಿ ಧ್ವಜವನ್ನು ವಿತರಿಸುವ ವೇಳೆ ಗ್ರಾಪಂ ಅಧ್ಯಕ್ಷರಾದ ಶ್ರುತಿ ಪ್ರಕಾಶ್ ಧ್ವಜವನ್ನು ಉಲ್ಟಾ ಹಿಡಿದು ವಿತರಿಸಿದ್ದಾರೆ. ಈ ಚಿತ್ರ ಎಲ್ಲೆಡೆ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ರಾಷ್ಟ್ರದ ಪ್ರತೀಕವಾಗಿರುವ ರಾಷ್ಟ್ರಧ್ವಜವನ್ನು ವಿತರಿಸುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಅನುಸರಿಸಿಲ್ಲ. ಧ್ವಜ ಸಂಹಿತೆಗೆ ಅನುಸಾರವಾಗಿ ಧ್ವಜವನ್ನು ವಿತರಿಸಬೇಕು.
ತ್ರಿವರ್ಣ ಧ್ವಜಕ್ಕೆ ಸನ್ಮಾನ ಪೂರ್ವಕವಾಗಿ ಉಚ್ಛ ಸ್ಥಾನವನ್ನು ನೀಡಲಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಧ್ವಜದಲ್ಲಿ ಕೇಸರಿ ಪ್ರಧಾನವಾಗಿ ಮೇಲೆ ಇರಬೇಕು ಹಸಿರು ಕೆಳಭಾಗದಲ್ಲಿರಬೇಕು. ಧ್ವಜ ಹಾರಿಸುವ ಮುನ್ನ ಎದೆಯ ಮೇಲ್ಪಟ್ಟದಿಂದ ವಿತರಿಸಬೇಕು.
ಆದರೆ ಮುಸ್ಟೂರು ಗ್ರಾಪಂ ಅಧ್ಯಕ್ಷರು ಧ್ವಜ ವಿತರಿಸುವಾಗ ಉಲ್ಟಾ ಹಿಡಿದಿದ್ದು ಸಾರ್ವಜನಿಕವಾಗಿ ಬಾರೀ ಟೀಕೆ ವ್ಯಕ್ತವಾಗಿದೆ. ಅವರ ಬೇಜವಾಬ್ದಾರಿ ವರ್ತನೆ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಟೂರು ಗ್ರಾಪಂ ಅಧ್ಯಕ್ಷರಾದ ಶ್ರುತಿ ಪ್ರಕಾಶ್ ಅವರು ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವುದು ಸಾರ್ವಜನಿಕರಿಂದ ತಿಳಿಯಿತು. ಈ ಬಗ್ಗೆ ತಾಪಂ ಇಓ ಚಂದ್ರಶೇಖರ್ ಅವರಿಗೆ ಸೂಚನೆ ನೋಡಿದ್ದೇನೆ. ತನಿಖೆ ಮಾಡಿ ವರದಿ ಕೊಡಿ ಎಂದು ಕೇಳಿದ್ದೇನೆ. ವರದಿ ಬಂದ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಜಿ.ಸಂತೋಷ್‍ಕುಮಾರ್, ತಹಶೀಲ್ದಾರ್. ಜಗಳೂರು .
ರಾಷ್ಟ್ರಧ್ವಜಕ್ಕೆ ನಾನು ಬೇಕು ಅಂತಲೇ ಅವಮಾನ ಮಾಡಿಲ್ಲ. ಧ್ವಜ ತೆಗೆಯುವಾಗ ಈ ರೀತಿ ಆಗಿದೆ. ಯಾರೋ ನನ್ನ ಹೆಸರಿಗೆ ಕಟ್ಟ ಹೆಸರು ಬರಲಿ ಎಂದು ಈ ರೀತಿ ಮಾಡಿದ್ದಾರೆ. ಸಾರ್ವಜನಿಕರಿಗೆ ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ.
-ಶ್ರುತಿ ಪ್ರಕಾಶ್, ಅಧ್ಯಕ್ಷರು, ಮುಸ್ಟೂರು.