ಸುದ್ದಿವಿಜಯ, ಜಗಳೂರು: ಮಹಿಳಾ ದೌರ್ಜನ್ಯ ತಡೆಗೆ ಸಮರಕಲೆಗಳಾದ ಕರಾಟೆ, ಕುಂಗ್ಫು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಇವುಗಳನ್ನು ಮೈಗೂಡಿಸಿಕೊಂಡರೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಲು ಸಾಧ್ಯ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪಪಂ, ಬಿಇಒ ಕಚೇರಿ, ಸರಕಾರಿ ಆಸ್ಪತ್ರೆ, ಸರಕಾರಿ ಪದವಿಪೂರ್ವ ಕಾಲೇಜು ಮತ್ತು ದಾವಣಗೆರೆಯ ಕರಾಟೆ ಕೇಸರಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಮೃತ ವನಿತಾ ಸಮರ ಕಲೆ ಉಚಿತ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ದೌರ್ಜನ್ಯಗಳು ನಿಯಂತ್ರಣಕ್ಕೆ ಬರಬೇಕಾದರೆ ವಿದ್ಯಾರ್ಥಿಗಳು ಮಾರ್ಷಲ್ ಆಟ್ರ್ಸ್ ಕಲೆಗಳನ್ನು ಕಲಿಯಬೇಕು. ಇದರಿಂದ ಆರೋಗ್ಯವು ಸುಧಾರಣೆಯಾಗುತ್ತದೆ.
ಆತ್ಮಸ್ಥೈರ್ಯ ಹೆಚ್ಚುತ್ತದೆ. ಹುಡುಗಿಯರು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದು ಗೊತ್ತು. ನಿಮ್ಮ ಆತ್ಮಸೈರ್ಯ ಮತ್ತು ದೈಹಿಕ ಸದೃಢತೆಗೆ ಸಹಕಾರಿಯಾಗುತ್ತದೆ. ಯಾರಾದರೂ ನಿಮಗೆ ದೌರ್ಜನ್ಯ ಮಾಡಲು ಬಂದರೆ ನಿಮ್ಮ ಸಮರ ಕಲೆಗಳನ್ನು ತೋರಿಸಿದರೆ ದೌರ್ಜನ್ಯಗಳನ್ನು ತಡೆಯಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ವಿ.ರಾಮಚಂದ್ರ, ಮಹಿಳಾ ಸಬಲೀಕರಣಕ್ಕೆ ನಾನು ಸದಾ ಸಿದ್ದನಿದ್ದೇನೆ. ಪಟ್ಟಣದಲ್ಲಿ ಯಾರೂ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ.
ಆರು ದಿನಗಳ ಕಲಾ ಸಮರ ಕಲೆಗಳನ್ನು ಯಶಸ್ವಿಯಾಗಿ ಕಲಿತರೆ ಅಂತಹ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 10 ಸಾವಿರ ಮತ್ತು ದ್ವಿತೀಯ ಬಹುಮಾನವಾಗಿ 5 ಸಾವಿರ ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಕರಾಟೆ ಕೇಸರಿ ಅಸೋಸಿಯೇಷನ್ ಕಾರ್ಯದರ್ಶಿ ಕುಬೇರ್ ನಾಯ್ಕ್ ಅವರ ತಂಡ ಕರಾಟೆ ಕಲೆಗಳನ್ನು ಪ್ರದರ್ಶಿಸಿದರು.
ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಪಪಂ ಅಧ್ಯಕ್ಷೆ ಸಿ.ವಿಶಾಲಾಕ್ಷಿ ಓಬಳೇಶ್, ಬಿಇಒ ಉಮಾದೇವಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ, ಸಕರಾರಿ ಪಿಯು ಕಾಲೇಜು ಉಪಪ್ರಾಂಶುಪಾಲ ಡಿ.ಡಿ.ಹಾಲಪ್ಪ, ಸಿಪಿಐ ಸತ್ಯನಾರಾಯಣ, ಸಿಪಿಐ ಮಂಜುನಾಥ್ ಪಂಡಿತ್, ಪಿಎಸ್‍ಐ ಮಹೇಶ ಹೊಸಪೇಟ ಉಪಸ್ಥಿತರಿದ್ದರು. ವಿವಿಧ ಶಾಲಾ, ಕಾಲೇಜುಗಳ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸಮರಕಲೆ ಶಿಬಿರದಲ್ಲಿ ಭಾಗವಹಿಸಿದ್ದರು.