ಸುದ್ದಿವಿಜಯ ಜಗಳೂರು. ಪಿಎಂ ಕಿಸಾನ್ ಯೋಜನೆಯಿಂದ ಹಲವು ಅಕ್ರಮ ಫಲಾನುಭವಿಗಳು ಆರ್ಥಿಕ ಲಾಭ ಪಡೆಯುತ್ತಿರುವುದನ್ನು ತಪ್ಪಿಸಲು ಸರ್ಕಾರ ಇಕೆವೈಸಿ ಕಡ್ಡಾಯಗೊಳಿಸಿದೆ ಎಂದು ಸಂಕಲ್ಪ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಕೆ. ಸೋಮಶೇಖರ್ ಹೇಳಿದರು.
ತಾಲೂಕಿನ ಮರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಕಲ್ಪ ಅಭಿವೃದ್ದಿ ಸಂಸ್ಥೆ, ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯ ಜಾಗೃತಿ ಹಿನ್ನೆಲೆ ಶಾಲಾ ಮಕ್ಕಳ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಧ್ಯಮ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆ ಫಲವು ಕೆಲವು ಕಾರಣಗಳಿಂದ ಯೋಜನೆಗೆ ಅರ್ಹತೆಯಿಲ್ಲದ ಫಲಾನುಭವಿಗಳು ಮತ್ತು ಇತರೆ ರೈತರ ಖಾತೆಗಳನ್ನು ತಲುಪುತ್ತಿದೆ. ಇಂತಹ ಚಟುವಟಿಕೆಗಳನ್ನು ತಡೆಗಟ್ಟಲು ರೈತರ ಅರ್ಹತೆಯನ್ನು ಸಾಬೀತುಪಡಿಸಲು ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಇಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಇದು ಪಿಎಂ ಕಿಸಾನ್ ಯೋಜನೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಅಕ್ರಮ, ಅನರ್ಹ, ವಂಚನೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದರು.
ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸುವ ಸಲುವಾಗಿ, ಮೋದಿ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ ಯೋಜನೆಯಡಿ, ಅರ್ಹ ರೈತರಿಗೆ ಪ್ರತಿ ವರ್ಷ ೬೦೦೦ ರೂ.ಗಳನ್ನು ನೀಡಲಾಗುತ್ತದೆ. ಈ ಹಣವನ್ನು ರೈತರಿಗೆ ಪ್ರತಿ ತಲಾ ೨ ಸಾವಿರದಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಇದರಿಂದ ಕೃಷಿಕರಿಗೆ ಬಿತ್ತನೆಗೆ ಬೀಜ, ಗೊಬ್ಬರ ಇತರೆ ಕೃಷಿ ಕೆಲಸಗಳಲ್ಲಿ ತುಂಬ ಅನುಕೂಲವಾಗಿದೆ. ಸರ್ಕಾರದಿಂದ ಸಿಗುವ ಈ ಸೌಲಭ್ಯಗಳನ್ನು ಪ್ರತಿಯೊಬ್ಬರು ಸದುಪಯೋಗ ಡಿಸಿಕೊಂಡು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳಿಂದು ಗ್ರಾಮದ ಪ್ರಮುಖು ಬೀದಿಗಳಲ್ಲಿ ಜಾಗೃತ ಜಾಥಾ ನಡೆಸಿ ಜನರಿಗೆ ಅರಿವು ಮೂಡಿಸಿದರು.
ಸಂಕಲ್ಪ ಅಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಸೌಭಾಗ್ಯಲಕ್ಷ್ಮೀ, ಮುಖ್ಯ ಶಿಕ್ಷಕಿ ದೇವಿರಮ್ಮ, ಸಿಎಲ್‌ಸಿ ಸದಸ್ಯರಾದ ಕೆ.ಟಿ ಭಾರತಿ,ಕೆ.ಟಿ ತಿಪ್ಪೇಸ್ವಾಮಿ, ಗ್ರಾಮದ ಮುಖಂಡ ತಿಪ್ಪೇಸ್ವಾಮಿ ಇದ್ದರು.