ಸುದ್ದಿವಿಜಯ, ದೆಹಲಿ: ಕ್ಷಯ ಮುಕ್ತ ವಾತಾವರಣ ನಿರ್ಮಾಣವಾಗಬೇಕಾದರೆ ಗ್ರಾಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಿಎಚ್‍ಸಿ ವೈದ್ಯಾಧಿಕಾರಿಗಳ ಸಹಭಾಗಿತ್ವ ಅತ್ಯಂತ ಅವಶ್ಯಕ ಎಂದು ಸೊಕ್ಕೆ ಗ್ರಾಪಂ ಅಧ್ಯಕ್ಷೆ ಹಾಗೂ ದಿಶಾ ಸಮಿತಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ ಹೇಳಿದರು.
ಕೇಂದ್ರ ಟಿಬಿ ಡಿವಿಷನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‍ಪಿಟಿ)ಯುನೈಟೆಡ್ ಹಾಗೂ ಏಜೆನ್ಸಿ ಆಫ್ ಇಂಟರ್‍ನ್ಯಾಷನಲ್ ಡೆವೆಲಪ್ಮೆಂಟ್ (ಯುಎಸ್‍ಎಐಡಿ) ಸಹಯೋಗದೊಂದಿಗೆ ದೆಹಲಿಯಲ್ಲಿ ಸೆ.14 ಮತ್ತು 15 ರಂದು ನಡೆಯತ್ತಿರುವ ಟಿಬಿ ಮುಕ್ತ ಅಭಿಯಾನ ಕಾರ್ಯಾಗಾರದಲ್ಲಿ ಬುಧವಾರ ಸೊಕ್ಕೆ ಗ್ರಾಪಂ ಪ್ರತಿನಿಧಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ಆರೋಗ್ಯ ಸುಧಾರಣೆ ಆಗಬೇಕಾದರೆ ಮೊದಲು ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಟಿಬಿ ಎಂಬುದು ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ಬುಡ ಸಹಿತವಾಗಿ ಕಿತ್ತು ಹಾಕಬೇಕಾದರೆ ಪಂಚಾಯತ್ ರಾಜ್ ವ್ಯವಸ್ಥೆ ಬಲವಾಗಬೇಕು. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟಿಬಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಸಬೇಕು.
ಹಳ್ಳಿ ಹಳ್ಳಿಗಳಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿದರೆ ಕ್ಷಯ ಎಂಬ ಮಾರಕ ರೋಗ ನಿರ್ಮೂಲನೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಇತ್ತೀಚೆಗೆ ಟಿಬಿ ಸೋಂಕು ನಿಯಂತ್ರಣದಲ್ಲಿದ್ದು ಇದಕ್ಕೆ ಕಾರಣ ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿದೆ. ಜೊತೆಗೆ ಆರೋಗ್ಯ ಇಲಾಖೆಯ ಸುಧಾರಣಾ ಚಿಕಿತ್ಸೆಯೂ ಪೂರಕವಾಗಿ ನೆರವಾಗುತ್ತಿದೆ. ಅಷ್ಟೇ ಅಲ್ಲ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಟಿಬಿ ಮುಕ್ತಮಾಡಲು ಪಣ ತೊಟ್ಟಿದ್ದಾರೆ.
ಒಂದೇ ಒಂದು ಪ್ರಕರಣ ಕಂಡು ಬಂದರೂ ಅವರಿಗೆ ಟಿಬಿ ಮುಕ್ತವಾಗಿಡಲು ಹೇಗೆಲ್ಲ ಜಾಗೃತರಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿರುವುದು ಸೋಂಕು ನಿಯಂತ್ರಣದ ಆಶಾ ದೀವಿಗೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.