ಸುದ್ದಿವಿಜಯ, ಜಗಳೂರು: ರೈತರು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಿಂದ ತಮ್ಮ ಜಮೀನುಗಳಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ಜಿಪಂ ಸಿಇಒ ಡಾ.ಚನ್ನಪ್ಪ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಹಾಲೇಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಹೂಳೆತ್ತುವ ಕಾಮಗಾರಿಯನ್ನು ಬುಧವಾರ ವೀಕ್ಷಣೆ ಮಾಡಿದ ನಂತರ ಬಿಳಿಚೋಡು ಹೋಬಳಿ ವ್ಯಾಪ್ತಿಗೆ ಬರುವ ವಿವಿಧ ಗ್ರಾಮಗಳಲ್ಲಿ ಎನ್‍ಆರ್‍ಇಜಿ ಅಡಿ ತೋಟಗಾರಿಕೆ ಇಲಾಖೆಯಿಂದ ವೈಯಕ್ತಿಕ ಕಾಮಗಾರಿ ಮಾಡಿಸಿಕೊಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ರೈತರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋಟ್ಯಾಂತರ ರೂಪಾಯಿ ಅನುದಾನ ನೀಡುತ್ತಿವೆ. ಜೊತೆಗೆ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಾದ ಅಂಗಾಶ ಬಾಳೆ, ಬಟನ್ ರೋಸ್, ಸೀಬೆ, ಪಪ್ಪಾಯ, ನುಗ್ಗೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಕಾರ್ಮಿಕರಿಗೆ ಕೆಲಸ ಕೊಡುವ ಮೂಲಕ ರೈತ ಮತ್ತು ಕಾರ್ಮಿಕರಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗುತ್ತದೆ.
ಮೊದಲೆಲ್ಲ ಎನ್‍ಆರ್‍ಇಜಿ ಕೇವಲ ಸಮುದಾಯ ಕಾಮಗಾರಿಗಳಿಗೆ ಮಾತ್ರ ಸೀಮಿತವಾಗಿತ್ತು. ಪ್ರಸ್ತುತ ರೈತರು ಸಹ ತಮ್ಮ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಸಿಕೊಂಡರೂ ಅದಕ್ಕೂ ಅವಕಾಶ ನೀಡುವ ಮೂಲಕ ರೈತರ ಅಭ್ಯುದಯದ ಜೊತೆ ಜೊತೆಗೆ 100 ಮಾನವ ದಿನಗಳ ಉದ್ಯೋಗ ನೀಡುವ ಯೋಜನೆಯ ಉದ್ದೇಶ ಈಡೇರಿದಂತಾಗುತ್ತದೆ ಎಂದು ರೈತರಿಗೆ ಮಾಹಿತಿ ನೀಡಿದರು.
ತಾಲೂಕಿನ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಎಚ್.ಆರ್.ವೆಂಕಟೇಶ್ ಮೂರ್ತಿ ಮಾತನಾಡಿ, ಇತ್ತೀಚೆಗೆ ಜಗಳೂರು ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳ ವಿಸ್ತಾರ ಹೆಚ್ಚಾಗುತ್ತಿದೆ. ಪ್ರಸ್ತುತ ವರ್ಷ ಬಿಳಿಚೋಡು ಮತ್ತು ಕಸಬ ಹೋಬಳಿಗಳಲ್ಲಿ 100ಕ್ಕೂ ಹೆಚ್ಚು ರೈತರು ಎನ್‍ಆರ್‍ಇಜಿ ಅಡಿ ವೈಯಕ್ತಿಕ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಮಾಡಿಕೊಳ್ಳುವ ಮೂಲಕ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಂಡಿದ್ದಾರೆ. ಆಸಕ್ತ ರೈತರು ತೋಟಗಾರಿಕೆ ಇಲಾಖೆಗೆ ಬಂದು ಸರಕಾರದ ಯೋಜನೆಗಳ ಮಾಹಿತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಈ ವೇಳೆ ಬಿಳಿಚೋಡು ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ ಜಿ.ಎಚ್. ಪ್ರಸನ್ನ ಕುಮಾರ್, ಎನ್‍ಆರ್‍ಇಜಿ ತಾಂತ್ರಿಕ ಸಂಯೋಜಕ ಕೆ.ಜಿ.ಹರ್ಷಾ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು