ಸುದ್ದಿವಿಜಯ ಜಗಳೂರು. ಸ್ಪರ್ಧಾತ್ಮಕ ಯುಗದಲ್ಲಿ ಅಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ವಿದ್ಯಾರ್ಥಿಗಳು ವ್ಯಕ್ತಿತ್ವ ಅಭಿವೃದ್ಧಿಯಲ್ಲಿ ತೊಡಗಬೇಕೆಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಇಲ್ಲಿನ ಇಮಾಂ ಸ್ಮಾರಕ ಪ್ರೌಢಶಾಲೆಯಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಾಯೋದಗಲ್ಲಿ ನಡೆದ ತಾಲೂಕು ಮಟ್ಟದ ಕಿರಿಯ/ಹಿರಿಯ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳು ಹೇರಳವಾಗಿದ್ದು, ಪ್ರತಿಭಾ ಕಾರಂಜಿಗಳಂತಹ ವೇದಿಕೆಗಳ ಮೂಲಕ ಹೊರ ಹೊಮ್ಮುತ್ತಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಪ್ರತಿಭಾ ಕಾರಂಜಿಗಳಂತಹ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಾಗಿದೆ ಎಂದರು.
ಪ್ರತಿಭಾ ಕಾರಂಜಿಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರಗೆ ತರಲು ಹಾಗೂ ಅವುಗಳಿಗೆ ಪ್ರೋತ್ಸಹ ನೀಡಲು ಅನುಕೂಲವಾಗುತ್ತವೆ. ಇದಕ್ಕೆ ಪಾಲಕರು ಹಾಗೂ ಶಿಕ್ಷಕರ ವರ್ಗವು ಹೆಚ್ಚಿನ ಗಮನ ನೀಡಿದರೆ ಅಂತಹ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳೆಗಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಇಂತಹ ವೇದಿಕೆಗಳ ಮೂಲಕ ಪ್ರದರ್ಶಿಸಿ ಅವುಗಳನ್ನು ಮುಂದಿನ ಹಂತಕ್ಕೆ ಮುಟ್ಟಿಸಬೇಕಾಗುತ್ತದೆ ಎಂದರು.
ಬಿಇಒ ಉಮಾದೇವಿ ಮಾತನಾಡಿ, ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರುವುದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಕಾರ್ಯಕ್ರಮ ಪೂರ್ಣಗೊಳ್ಳುವವರೆಗೂ ಆಯ್ಕೆ ಮಾಡಿರುವ ತೀರ್ಪುಗಾರರನ್ನು ಬದಲಾವಣೆ ಮಾಡುವಂತಿಲ್ಲ. ಯಾವುದೇ ಸ್ಪರ್ಧೆಯ ತೀರ್ಪಿನ ಬಗ್ಗೆ ದೂರುಗಳು ಬಂದಲ್ಲಿ ತೀರ್ಪುಗಾರರ ಮಂಡಳಿ ಸಮಿತಿ ದೂರಿನ ಬಗ್ಗೆ ಪರಿಶೀಲಿಸಿ ನ್ಯಾಯೋಚಿತ ನಿರ್ಣಯ ಕೈಗೊಳ್ಳುವುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಡಿ.ಡಿ ಹಾಲಪ್ಪ, ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಹನುಮಂತೇಶ್, ಕಾರ್ಯದರ್ಶಿ ಆಂಜನೇಯ ನಾಯ್ಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎನ್ ಸುರೇಶ್‌ರೆಡ್ಡಿ, ಪ್ರೌ, ಶಾ.ಶಿ.ಸಂಘದ ಜಿ.ಸಂ ಕಾರ್ಯದರ್ಶಿ ಕಲ್ಲಿನಾಥ್, ಶಿಕ್ಷಕರಾದ ಮಂಜುನಾಥ್, ವಿರೇಶ್ ಸೇರಿದಂತೆ ಮತ್ತಿತರಿದ್ದರು.