ಸುದ್ದಿವಿಜಯ,ಜಗಳೂರು: ಶುಕ್ರವಾರ ಬೆಳಗಿನ ಜಾವ ಸುರಿದ ಕುಂಭದ್ರೋಣ ಮಳೆಗೆ ಅಪಾರ ಪ್ರಮಾಣದ ಬೆಳೆಗಳು ಜಲಾವೃತಗೊಂಡಿವೆ. ಜಿಲ್ಲೆಯಲ್ಲಿಯೇ ಜಗಳೂರು ತಾಲೂಕಿನಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು ಸರಾಸರಿ 28.8 ಮಿ.ಮೀ. ಮಳೆಯಾಗಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಮಾಹಿತಿ ನೀಡಿದರು.
ರಾತ್ರಿ ಮಳೆಯಿಂದ ಪಲ್ಲಾಗಟ್ಟೆ ಗ್ರಾಮದಲ್ಲಿ 2, ಗುರುಸಿದ್ದಾಪುರ 1 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಟಾವಿಗೆ ಬಂದಿದ್ದ ಈರುಳ್ಳಿ, ಹತ್ತಿ, ಮೆಕ್ಕೆಜೋಳ, ರಾಗಿ, ಶೇಂಗಾ, ಸೋಯಾಬಿನ್ ಸೇರಿದಂತೆ ಅನೇಕ ಪ್ರಮಾಣದ ಬೆಳೆಹಾನಿಯಾಗಿದೆ ತಿಳಿಸಿದರು.
ಜಗಳೂರು ಪಟ್ಟಣ ವ್ಯಾಪ್ತಿಯಲ್ಲಿ 22.8 18 ಮಿ.ಮೀ, ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ 15 ಮಿಮೀ, ಸಂಗೇನಹಳ್ಳಿ ವ್ಯಾಪ್ತಿಯಲ್ಲಿ 18 ಮಿಮೀ, ಚಿಕ್ಕಬಂಟನಹಳ್ಳಿಯಲ್ಲಿ 32.ಮಿಮೀ, ಸೊಕ್ಕೆ ಹೋಬಳಿಯಲ್ಲಿ 28.4 ಮಿ.ಮೀ ಮಳೆಯಾಗಿದ್ದು ಒಟ್ಟಾರೆ 23.24 ಮೀಮೀ ಸರಾಸರಿ ಮಳೆಯಾಗಿದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈರುಳ್ಳಿ ದರ ಕುಸಿತವಾಗಿದ್ದು, ದಾಸ್ತಾನು ಮಾಡಿರುವ ಈರುಳ್ಳಿ ಶೇಕರಣಾ ಗುಡಾರಗಳಿಗೆ ನೀರು ನುಗ್ಗಿದೆ. ಹೀಗಾಗಿ ಈರುಳ್ಳಿ ರೈತರ ಪಾಲಿಗೆ ಕಣ್ಣೀರುಳ್ಳಿಯಾಗಿ ಪರಿಣಮಿಸಿದೆ.