ಬಿಳಿಚೋಡಿನ ಶತಮಾನದ ಸೇತುವೆ ಅಪಾಯದಲ್ಲಿ, ನಿರ್ಲಕ್ಷ ತೋರಿದ ಅಧಿಕಾರಿಗಳು

Suddivijaya
Suddivijaya October 15, 2022
Updated 2022/10/15 at 4:42 AM
ಸುದ್ದಿವಿಜಯ ಜಗಳೂರು.ಶತಮಾನ ತುಂಬಿದ ಈ ಹಳೆಯ ಸೇತುವೆ ಶಿಥಿಲಗೊಂಡು ಅಪಾಯದಂಚಿನಲ್ಲಿದೆ. ಇದರ ನಡುವೆ  ಅತಿಯಾಗಿ ಸುರಿದ ಮಳೆಗೆ ಭರಮಸಾಗರ ಕೆರೆಯಿಂದ ಬರುವ ನೀರು ಸೇತುವೆ ಮಟ್ಟಕ್ಕೆ ರಭಸವಾಗಿ ಹರಿಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಕಾಡುತ್ತಿದೆ.
ಜಗಳೂರು – ದಾವಣಗೆರೆ  ರಾಜ್ಯ ಹೆದ್ದಾರಿಗೆ ಹೊಂದಿಕೊಂಡ, ಬಿಳಿಚೋಡು ಗ್ರಾಮದ ಈ ಸೇತುವೆಗೆ ಕಾಯಕಲ್ಪ ಅನಿವಾರ್ಯವಾಗಿದೆ.
ಜಗಳೂರು- ದಾವಣಗೆರೆಯ ಮುಖ್ಯ ರಸ್ತೆಯಾಗಿರುವುದರಿಂದ  ಸೇತುವೆ  ಮೇಲೆ  ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಸೇತುವೆ ಕೆಳಗಿನ ಹಳ್ಳು ತುಂಬಿ ಹರಿಯುತ್ತಿದೆ. ಯಾವ ಕ್ಷಣದಲ್ಲಾದರೂ ಅಪಾಯ ಎದುರಾಗಬಹುದು. ಆದ್ದರಿಂದ ಅನಾಹುತ ಘಟಿಸುವ ಮುನ್ನವೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.
ನೂರು ವರ್ಷದ ಹೊಸ್ತಿಲಲ್ಲಿದ್ದರೂ ಇದನ್ನು ತೆರವುಗೊಳಿಸಿ ಕಾಯಕಲ್ಪ ಮಾಡುವ ಗೋಜಿಗೆ ಹೋಗದ ಜಿಲ್ಲಾಡಳಿತದ ಸಣ್ಣ ನಿರ್ಲಕ್ಷತನಕ್ಕೆ ಅದೆಷ್ಟು ಬಲಿ  ಪಡೆಯಲಿದೆಯೋ ಗೊತ್ತಿಲ್ಲ. ಸೇತುವೆ ಕೆಳ ಭಾಗ, ಪಕ್ಕದ ತಡೆ ಗೋಡೆಗಳು ಬಿರುಕುಬಿಟ್ಟು,  ಕಬ್ಬಿಣದ  ರಾಡುಗಳು  ಹೊರ ಚಾಚಿವೆ. ಭಾರವಾದ ವಾಹನಗಳು ಸಂಚರಿಸುವಾಗ ಸೇತುವೆ ಅಲುಗಾಡುಂತಹ ಸ್ಪರ್ಶವಾಗುತ್ತದೆ. ಯಾವ ಹೊತ್ತಲ್ಲಿ ಅನಾಹುತ ಸಂಭವಿಸುವುದೋ? ಎಲ್ಲಿ ಸೇತುವೆ ಕುಸಿದು ಪ್ರಾಣ ಬಲಿ ಪಡೆಯುತ್ತದೋ ಎಂಬ  ದುಗುಡ ಪ್ರಯಾಣಿಕರಲ್ಲಿದೆ.

ಅಧಿಕಾರಿಗಳ ದಿವ್ಯ ನಿರ್ಲಕ್ಷ:
ಸೇತುವೆ, ಬ್ರಿಡ್ಜ್ಕಂ ಬ್ಯಾರೇಜ್, ಚೆಕ್ ಡ್ಯಾಂ ನಿರ್ಮಾಣಕ್ಕಾಗಿ ಸರ್ಕಾರ ಪ್ರತಿ ವರ್ಷ ಕೋಟ್ಯಾಂತರ ರೂಗಳನ್ನು ಕ್ಷೇತ್ರಗಳಿಗೆ ಬಿಡುಗಡೆ ಮಾಡುತ್ತದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ದುಸ್ಥಿತಿಯಲ್ಲಿರುವ ಸೇತುವೆಗಳನ್ನು ಗುರುತಿಸಿ ಕಾಯಕಲ್ಪ ಮಾಡುವ ಬದಲು ಅನವಶ್ಯಕವಾದ ಸ್ಥಳಗಳಲ್ಲಿ ನಿರ್ಮಾಣ ಮಾಡುವುದು ಯಾವ ನ್ಯಾಯ. ಇದು ರಾಜ್ಯ ಹೆದ್ದಾರಿಯಾಗಿರುವುದರಿಂದ ಭಾರಿ ವಾಹನಗಳು, ಬಸ್, ಲಾರಿ, ಕಾರು ಸೇರಿದಂತೆ ಸಾವಿರಾರು ವಾಹನಗಳು ದಿನದ 24 ತಾಸು ಸಂಚರಿಸುತ್ತವೆ. ಒಮ್ಮೆ ಸೇತುವೆ ಕುಸಿದರೇ ಇದಕ್ಕೆ ಎಷ್ಟು ಜನರು ಬಲಿಯಾಗುತ್ತಾರೆ? ಸತ್ತ ಮೇಲೆ ಬಂದು ಸಂತಾಪ ಸೂಚಿಸುವ ಮೊದಲೇ ಹೊಸ ಸೇತುವೆ ನಿರ್ಮಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಬಿಳಿಚೋಡು ಗ್ರಾಮದ ಹರ್ಷ, ರಮೇಶ್ ಜಿಲ್ಲಾಡಳಿತದ ಕಾರ್ಯವೈಖರಿಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
 
“ದಾವಣಗೆರೆ-ಜಗಳೂರು  ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ಕಿರಿದಾದ ಈ ಸೇತುವ ಅಪಾಯದಲ್ಲಿದೆ. ಈ ಬಗ್ಗೆ ಹತ್ತಾರು ಬಾರಿ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಕ್ಕೂ ತಂದಿದ್ದಾಯಿತು. ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನಿತ್ಯ ಇದೇ ದಾರಿಯಲ್ಲಿ ಅಧಿಕಾರಿಗಳು, ಸಂಸದರು, ಶಾಸಕರು ಓಡಾಡುತ್ತಾರೆ ಒಬ್ಬರು ಕಾಳಜಿವಹಿಸುತ್ತಿಲ್ಲ. ಸೇತುವೆ ತೆರವುಗೊಳಿಸಿ ದೊಡ್ಡದಾಗಿ ಬ್ರಿಡ್ಜ್ ಕಂ ಬ್ಯಾರೇಜ್  ಮಾಡಬೇಕು.”  
-ನಟರಾಜ್, ಸ್ಥಳೀಯ
“ಮಳೆಗಾಲದಲ್ಲಿ ಸೇತುವೆ ಮೇಲೆ ಓಡಾಡಲು ಭಯವಾಗುತ್ತದೆ. ಸೇತುವೆ ಕೆಳಭಾಗದ ಪಿಲ್ಲರ್‌ಗಳು ತನ್ನ ಶಕ್ತಿಯನ್ನು ಕಳೆದುಕೊಂಡಿವೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಅಪಾಯ ತಪ್ಪಿದ್ದಲ್ಲಾ, ಅಧಿಕಾರಿಗಳು ಮುಂಜಾಗರುಕತೆವಹಿಸಬೇಕು. ಇಲ್ಲವೇ ವಾಹನಗಳು ಪ್ರತ್ಯೇಕವಾಗಿ ಸಂಚರಿಸಲು ಅವಕಾಶ ಕಲ್ಪಿಸಬೇಕು”  
           – ಹಾಲೇಶ್, ಹೋರಾಟಗಾರ  
“ ರಾಜ್ಯ ಹೆದ್ದಾರಿಯಲ್ಲಿರುವ ಸೇತುವೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಾಗಿದೆ. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಆದರೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಶಾಸಕರ ಜತೆ ಚರ್ಚಿಸಿ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲಾಗುವುದು”
   – ರುದ್ರಪ್ಪ, ಎಇಇ ಲೋಕೋಪಯೋಗಿ ಇಲಾಖೆ
   
Share this Article
Leave a comment

Leave a Reply

Your email address will not be published. Required fields are marked *

error: Content is protected !!