ಸುದ್ದಿವಿಜಯ,ಜಗಳೂರು: ಭಾರೀ ಮಳೆಯಿಂದ ಹಾನಿಗೊಳಗಾದ ತಾಲೂಕಿನ ಬಿಳಿಚೋಡು ಹೋಬಳಿ ಮತ್ತು ಕಸಬಾ ಹೋಬಳಿಯ ವಿವಿಧ ಗ್ರಾಮಗಳಿಗೆ ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಮತ್ತು ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಸಮಸ್ಯೆ ಹಾಲಿಸಿದರು.
ಬಿಳಿಚೋಡು ಹೋಬಳಿಯಲ್ಲಿ ಅಪಾರ ಪ್ರಮಾಣದ ಮಳೆ ಸುರಿದಿದ್ದು, ಅಂದಾಜು 40ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಹೀಗಾಗಿ ಬಿಳಿಚೋಡು ಪದವಿಪೂರ್ವ ಕಾಲೇಜಿನಲ್ಲಿ ಕಾಳಜಿ ಕೇಂದ್ರ ತೆಗೆದಿರುವ ತಾಲೂಕು ಆಡಳಿತ ಸುಮಾರು 200ಕ್ಕೂ ಹೆಚ್ಚು ಸಾರ್ವಜನಿಕರಿಗೆ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿದೆ.
ಹಾಗಾಗಿ ತಹಶೀಲ್ದಾರ್ ಜಿ.ಸಂತೋಷ್ಕುಮಾರ್ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಸ್ವಚ್ಛತೆ ಕಾಪಾಡಿಕೊಂಡಿಕೊಳ್ಳಿ ಗುಂಡಿಬಿದ್ದಿರುವ ರಸ್ತೆಗಳಲ್ಲಿ ಸೊಳ್ಳೆಗಳು ಹೆಚ್ಚಾಗುತ್ತಿದ್ದು ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದರು.
ಮನೆಯಲ್ಲೇ ಉಕ್ಕಿದ ಅಂತರ್ಜಲ: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಚಂದ್ರಯ್ಯ ಎಂಬುವವರ ಮನೆಯಲ್ಲಿ ಅಂತರ್ಜಲ ಉಕ್ಕುತ್ತಿದ್ದು ತಾಲೂಕು ಆಡಳಿತ ಆ ಕುಟುಂಬವನ್ನು ಸ್ಥಳಾಂತರಿಸಿದೆ. ನೆಲಕ್ಕೆ ಹಾಸಲಾಗಿರುವ ನುಣುಪಾದ ಕಲ್ಲುಗಳ ನಡುವೆ ನೀರು ಹೊರ ಬರುತ್ತಿದ್ದು ತಹಶೀಲ್ದಾರ್ ಭೇಟಿ ನೀಡಿ ವೀಕ್ಷಿಸಿದರು. ತಕ್ಷಣವೇ ಮನೆ ಖಾಲಿ ಮಾಡಿ ಎಂದು ಕುಂಟುಬದವರಿಗೆ ಸೂಚನೆ ನೀಡಿದರು.
20ಕ್ಕೂ ಹೆಚ್ಚು ಮನೆಗಳಲ್ಲಿ ಭಾಗಶಃ ನೀರು ಉಕ್ಕುತ್ತಿದ್ದು ತಕ್ಷಣವೇ ನಮಗೆ ವಸತಿ ವ್ಯವಸ್ಥೆ ಕಲ್ಪಿಸಿ ಇಲ್ಲವೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿ ಎಂದು ಕಟ್ಟಿಗೆಹಳ್ಳಿ ಗ್ರಾಮದ ಬೋವಿ ಕಾಲೂನಿಯ ನಾಗರಿಕರು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್, ಪಿಡಿಒ ಮರುಳಸಿದ್ದಪ್ಪ ಅವರನ್ನು ಸ್ಥಳಕ್ಕೆ ಕರೆಸಿ ಶೀಘ್ರವೇ ಸಮಸ್ಯೆಯ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದರು. ಈವೇಳೆ ಆರ್ಐ ಕುಬೇರ್ ನಾಯ್ಕ, ವಿಎ ಶಾಂತಮ್ಮ, ಗ್ರಾಪಂ ಸದಸ್ಯರಾದ ಭಾರತೀ ಮಂಜುನಾಥ್, ಬಾಲಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.