ಸುದ್ದಿವಿಜಯ,ಜಗಳೂರು: ವಿದ್ಯಾರ್ಥಿಗಳು ತರಗತಿಯಲ್ಲಿ ಕೇಳುವ ಪಾಠವನ್ನ ಮನೆಗಳಲ್ಲಿ ಒಮ್ಮೆ ಮೆಲುಕು ಹಾಕಿದರೆ ಪರೀಕ್ಷೆ ಬರೆಯಲು ತುಂಬ ಸಹಕಾರಿಯಾಗುತ್ತದೆ ಎಂದು ಪ್ರೇರಣಾ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಪಾದರ್ ವಿಲಿಯಂ ಮಿರಾಂದೆ ಹೇಳಿದರು.
ಇಲ್ಲಿನ ಅಲ್ಪ ಸಂಖ್ಯಾತ ವರ್ಗದ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ ಶನಿವಾರ ಪ್ರೇರಣಾ ಸಮಾಜ ಸೇವಾ ಸಂಸ್ಥೆ ಮತ್ತು ತಪಸ್ಸು ಟ್ರಸ್ಟ್ ಹಾಗೂ ಅಲ್ಪ ಸಂಖ್ಯಾತ ಮೊರಾರ್ಜಿ ವಸತಿಯುತ ಶಾಲೆ ಇವರ ಸಹಯೋಗದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ನಿವಾರಣೆ ಹಾಗೂ ಏಕಾಗ್ರತೆಯಿಂದ ಓದುವ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಎಸ್ಎಸ್ಎಲ್ಸಿ ಪರೀಕ್ಷೆಯೂ ಮುಂದಿನ ಶೈಕ್ಷಣಿಕ ಭವಿಷ್ಯದ ದಿಕ್ಸೂಚಿಯಾಗಿದ್ದು, ಎಚ್ಚರಿಕೆಯಿಂದ ಓದಬೇಕು, ಸ್ವಲ್ಪ ನಿರ್ಲಕ್ಷ ತೋರಿದರು ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಎಸ್ಎಸ್ಎಲ್ಸಿ ಬಂದ ದಿನದಿಂದಲೇ ದಿನ ನಿತ್ಯ ಕೇಳಿದ ಪಾಠವನ್ನು ಮನನ ಮಾಡಿಕೊಂಡರೇ ಜ್ಞಾಪಕದಲ್ಲಿ ಉಳಿದುಕೊಳ್ಳುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೇ ನಿರಾಳವಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು.
ತಪಸ್ಸು ಟ್ರಸ್ಟ್ ಮುಖ್ಯಸ್ಥ ಮಂಜುನಾಥ್ ಗುರೂಜಿ ಮಾತನಾಡಿ, ಆರಂಭದ ದಿನಗಳಲ್ಲಿ ಪರೀಕ್ಷೆ ಬರೆಯುವಾಗ ಭಯ, ಆತಂಕ ಸಹಜವಾಗಿರುತ್ತದೆ ಆದರೆ ಅದನ್ನು ದೂರ ಮಾಡಬೇಕಾದರೆ ಚನ್ನಾಗಿ ಓದಬೇಕು, ಶಿಕ್ಷಕರು ಹೇಳು ಪಾಠವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಜಗಳೂರು ತಾಲೂಕು ಸತತ ಮೂರನೇ ಬಾರಿಯೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡು ಜಿಲ್ಲೆಗೆ ಪ್ರಥಮವಾಗಿದೆ. ಇದು ವಿದ್ಯಾರ್ಥಿಗಳ ಪರಿಶ್ರಮದ ಫಲವಾಗಿದೆ ಈ ಬಾರಿ ಆ ಸ್ಥಾನವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯರಾದ ರೂಪ, ಶಿಕ್ಷಕಿಯರಾದ ಆಶಾ, ಅರ್ಚಿತಾ, ನಳಿನಾ, ಜ್ಯೋತಿ, ಹಸೀನಾಭಾನು, ಕೊಟ್ರಮ್ಮ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.