ಸುದ್ದಿವಿಜಯ, ಜಗಳೂರು: ವಿಕೇಂದ್ರೀಕರಣದಿಂದ ಗ್ರಾಮ ವಿಕಾಸ ಎಂಬ ಮಹಾತ್ಮ ಗಾಂಧೀಜಿ ಅವರ ಕಲ್ಪನೆಯನ್ನು ಸಹಕಾರ ಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗ್ರಾಪಂಗಳಿಗೆ ಸಂಪೂರ್ಣ ಪವರ್ ನೀಡಿವೆ. ಆದರೆ ತಾಲೂಕಿನ 22 ಗ್ರಾಪಂಗಳು ವಿದ್ಯುತ್ ಪವರ್ ಬಿಲ್ ಪಾವತಿಸದಷ್ಟು ಸೊರಗಿವೆಯಾ? ಎನ್ನುವ ಪ್ರಶ್ನೆ ಉದ್ಭವಾಗಿದೆ.
ಹೌದು ಜಗಳೂರು ವಿಧಾನಸಭಾ ಕ್ಷೇತ್ರದ 22 ಗ್ರಾಪಂಗಳಲ್ಲಿ 2917.85 (2.91ಕೋಟಿ) ಲಕ್ಷ ರೂ. ವಿದ್ಯುತ್ ಬಿಲ್ ಸಕಾಲಕ್ಕೆ ಪಾವತಿಸದೇ ಬಾಕಿ ಉಳಿದಿದೆ. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿದ್ಯುತ್ ಬಿಲ್ಕಟ್ಟಿಸಿಕೊಳ್ಳುವುದು ತಲೆ ನೋವಾಗಿದೆ.
ಹರಸೀಕೆರೆ ತಾಲೂಕಿಗೆ ಒಳಪಡುವ 7 ಗ್ರಾಪಂಗಳು ಸೇರಿದಂತೆ ಜಗಳೂರು ತಾಲೂಕಿನ ಒಟ್ಟು 22 ಗ್ರಾಪಂಗಳಲ್ಲಿ 2022ನೇ ಸಾಲಿನ ವರೆಗೆ ಅನೇಕ ಗ್ರಾಪಂಗಳು ವಿದ್ಯುತ್ ಬಿಲ್ ಪಾವತಿಸದೇ ಮೈಮರೆತಿವೆ. ಹೀಗಾಗಿ 2.91 ಕೋಟಿ ರೂಗಿಂತಲೂ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿವೆ.
ಕುಡಿಯುವ ನೀರು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಪಾವತಿಸದೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮೈ ಮರೆತಿದ್ದಾರೆ. ಬೆಸ್ಕಾಂ ನಿಂದ ಪದೇ ಪದೇ ನೋಟಿಸ್ ಕಳುಹಿಸಿದರೂ ಖ್ಯಾರೇ ಅನ್ನದ ಪಿಡಿಓಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಶ್ರೀಸಾಮಾನ್ಯರು ಒಂದು ತಿಂಗಳು ಬಿಲ್ ಪಾವತಿಸದೇ ಇದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ಬೆಸ್ಕಾಂ ಲೈನ್ ಮನ್ಗಳು ಗ್ರಾಪಂಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಅನ್ನು ಕಟ್ಟದೇ ಇದ್ದರೂ ಪರಿಣಾಮಕಾರಿಯಾಗಿ ವಸೂಲಿ ಮಾಡಿಲ್ಲ.
ಒಂದು ವರ್ಷದ ಹಿಂದೆ ಜಗಳೂರು ತಾಲೂಕಿಗೆ ವರ್ಗಾವಣೆಯಾಗಿ ಬಂದಿರುವ ಬೆಸ್ಕಾಂನ ಎಇಇ ಎಚ್.ಗಿರೀಶ್ ನಾಯ್ಕ ಅವರು 22 ಗ್ರಾಪಂಗಳಲ್ಲಿ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಾಕಿ ವಸೂಲಿಗಾಗಿ ದಿಟ್ಟ ಗ್ರಮ ಕೈಗೊಂಡಿದ್ದಾರೆ.
ಪಾವತಿಸದಿದ್ದರೆ ವಿದ್ಯುತ್ ಕಡಿತ: ರಾಜ್ಯ ಸರಕಾರ ವಿದ್ಯುತ್ ಬಿಲ್ಲಿನ ಬಾಕಿಗೆ ಈಗಾಗಲೇ ಎಸ್ಕ್ರೋ ಮತ್ತು 14 ಹಾಗೂ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಹಣ ಬಿಡುಗಡೆ ಮಾಡಿದೆ. ಆದರೂ ಸಹ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಿಲ್ ಪಾವತಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಹೀಗಾಗಿ ಏಳು ದಿನಗಳೊಳಗಾಗಿ ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ಗ್ರಾಮಗಳಿಗೆ ಕುಡಿಯುವ ನೀರು, ಬೀದಿ ದೀಪಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುವುದಾಗಿ ಅವರು ಸುದ್ದಿವಿಜಯಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಾಪಂ ಇಒ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದು ಇ-ಬೆಳಕು ತಂತ್ರಾಂಶದ ಅಡಿ ಸಂಬಂಧ ಪಟ್ಟ ಗ್ರಾಪಂಗಳ ಪಿಡಿಒ-ಅಧ್ಯಕ್ಷರು ಡಾಂಗಲ್ ಮೂಲಕವೇ ವಿದ್ಯುತ್ ಬಿಲ್ ಪಾವತಿಸಲು ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಪಂಗಳು (ಲಕ್ಷಗಳಲ್ಲಿ)
ಅಣಬೂರು-137, ಅಸಗೋಡು-83.64, ಬಸವನಕೋಟೆ-69.36, ಬಿದರಕೆರೆ-74.78, ಬಿಳಿಚೋಡು-65.12, ಬಿಸ್ತುವಳ್ಳಿ-141.25, ದೇವಿಕೆರೆ-131.42, ದಿದ್ದಿಗೆ-133.78, ದೊಣೆಹಳ್ಳಿ 104.83, ಗುರುಸಿದ್ದಾಪುರ-119.18, ಹಾಲೇಕಲ್ಲು-244.98, ಹನುಮಂತಾಪುರ-229.54, ಹಿರೇಮಲ್ಲನಹೊಳೆ-174.95, ಹೊಸಕೆರೆ-142.57, ಕಲ್ಲೇದೇವರಪುರ-58.08, ಕೆಚ್ಚೇನಹಳ್ಳಿ-159.11, ಕ್ಯಾಸೇನಹಳ್ಳಿ-116.42, ಮುಸ್ಟೂರು-60.93, ಪಲ್ಲಾಗಟ್ಟೆ-243.19, ಸೊಕ್ಕೆ-79.63, ತೋರಣಗಟ್ಟೆ-141.93. (ಒಟ್ಟು-2917.85 ಲಕ್ಷ ರೂ)
ಶೀಘ್ರವೇ ಪಾವತಿಸದೇ ಇದ್ದರೆ ವಿದ್ಯುತ್ ಕಡಿತ
ರಾಷ್ಟ್ರಪತಿ ಮಹಾತ್ಮ ಗಾಂಧಿಜೀ ಆಶಯಂದಂತೆ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು ಪವರ್ ಅನ್ನು ಸರಕಾರ ನೀಡಿದೆ. ಹಾಗೆಯೇ ಕುಡಿಯುವ ನೀರು, ಬೀದಿ ದೀಪಗಳಿಗೆ ಬೆಸ್ಕಾಂ ಸಹ ಹೆಚ್ಚು ಪವರ್ ನೀಡುತ್ತಿದೆ. ಆದರೆ ಬಾಕಿ ಉಳಿಸಿಕೊಂಡಿರುವ ಗ್ರಾಪಂಗಳು ಬೆಸ್ಕಾಂಗೆ ಹೊರೆ ಮಾಡುತ್ತಿವೆ. ಶೀಘ್ರವೇ ಪಾವತಿಸದೇ ಇದ್ದರೆ ವಿದ್ಯುತ್ ಕಡಿತ ಮಾಡಲಾಗುವುದು.
-ಎಚ್.ಗಿರೀಶ್ ನಾಯ್ಕ, ಬೆಸ್ಕಾಂ ಎಇಇ, ಜಗಳೂರು
ಇ-ಬೆಳಕು ಸಾಫ್ಟ್ವೇರ್ನಲ್ಲಿ ಅಪ್ಡೇಟ್
ಗ್ರಾಪಂಗಳಿಗೆ ವಿದ್ಯುತ್ ಬಿಲ್ಪಾವತಿಗೆ ಇ-ಬೆಳಕು ಸಾಫ್ಟ್ವೇರ್ ಬಂದಿದೆ. ಕೆಇಬಿ ಅವರೇ ಆರ್ಆರ್ನಂಬರ್ ಫಿಕ್ಸ್ ಮಾಡಿದ್ದಾರೆ. ಎಷ್ಟು ಆರ್ಆರ್ ನಂಬರ್ ಹಾಕಿದ್ದಾರೆ ಅದರಲ್ಲಿ ಎಷ್ಟು ಡಿಕೌಂಟ್ ಆಗಿವೆ. ನಮ್ಮ ಗ್ರಾಪಂಗಳು ಎಷ್ಟು ಸಂಪರ್ಕ ತೆಗೆದುಕೊಂಡಿದ್ದಾರೆ. ಎಷ್ಟು ಬೋರ್ವೆಲ್ಗಳಿಗೆ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಇ-ಬೆಳಕು ಸಾಫ್ಟ್ವೇರ್ನಲ್ಲಿ ಅಪ್ಡೇಟ್ ಆಗುತ್ತದೆ. ಆಗ ನೇರವಾಗಿ ಬಿಲ್ ಬೆಸ್ಕಾಂಗೆ ಖಾತೆಗೆ ಹೋಗುವಂತ ವ್ಯವಸ್ಥೆ ಆಗುತ್ತದೆ. ಆದಷ್ಟು ಬೇಗ ಪಾವತಿಸಲಾಗುವುದು.
-ಡಾ.ಚನ್ನಪ್ಪ, ಸಿಇಒ, ಜಿಲ್ಲಾ.ಪಂಚಾಯಿತಿ, ದಾವಣಗೆರೆ.
ಶ್ರೀಸಾಮಾನ್ಯರಿಗೆ ತೊಂದರೆ ಆದರೆ ಬೃಹತ್ ಹೋರಾಟ
ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರು. ಸಾಮಾನ್ಯರು ಪಿಲ್ ಕಟ್ಟದೇ ಇದ್ದರೆ ಕಡಿತಗೊಳಿಸುವ ಬೆಸ್ಕಾಂ ಸಿಬ್ಬಂದಿ ಗ್ರಾಪಂಗಳಲ್ಲಿ ಬಾಕಿ ಉಳಿಸಿಕೊಂಡಿರುವ ಬಿಲ್ಅನ್ನು ಇಷ್ಟು ದಿನಗಳಾದರೂ ಏಕೆ ಕಟ್ಟಿಸಿಕೊಂಡಿಲ್ಲ. ಜನರು ಸಂಪೂರ್ಣ ತೆರಿಗೆ ಪಾವತಿಸುತ್ತಾರೆ. ಸರಕಾರದಿಂದಲೂ ವಿವಿಧ ಯೋಜನೆಗಳಿಂದ ಹಣ ಬರುತ್ತದೆ. ಆದರೂ ಏಕೆ ಗ್ರಾಪಂಗಳ ಪಿಡಿಒ ಪಾವತಿಸಿಲ್ಲ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಒಂದು ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಶ್ರೀಸಾಮಾನ್ಯರಿಗೆ ತೊಂದರೆ ಆದರೆ ಬೃಹತ್ ಹೋರಾಟ ಮಾಡುತ್ತೇವೆ.
–ಪಿ.ಲಕ್ಷ್ಮಣ ನಾಯಕ, ರೈತ ಮುಖಂಡರು, ನಂಜುಂಡ ಸ್ವಾಮಿ ಬಣ ಜಗಳೂರು