ಸುದ್ದಿವಿಜಯ, ಜಗಳೂರು: ವ್ಯಕ್ತಿಯೊಬ್ಬರಿಂದ ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟು, ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ದಾವಣಗೆರೆಯ ಹಳೆ ಪಿಬಿ ರಸ್ತೆಯಲ್ಲಿರುವ ಹೋಟೆಲ್ ನಲ್ಲಿ ನಡೆದಿದೆ.
ತಾಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಬಸವರಾಜಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಂಚ ಸ್ವೀಕರಿಸಿದ್ದ 5 ಸಾವಿರ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇನ್ನು ತಾಲೂಕಿನ ಮೆದಕೆರೆನಹಳ್ಳಿ ಗ್ರಾಮದ ಶಾಂತಕುಮಾರ್ ಎಂಬುವರು ತನ್ನ ತಾಯಿಯಾದ ಶಾರದಮ್ಮ ಇವರ ಹೆಸರಿನಲ್ಲಿರುವ ಮನೆಯ ಇ-ಸ್ವತ್ತು ಮಾಡಿಕೊಡಲು 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಶಾಂತಕುಮಾರ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಶುಕ್ರವಾರ 5 ಸಾವಿರ ಲಂಚದ ಹಣವನ್ನು ದಾವಣಗೆರೆ ಹಳೆ ಬಸ್ ನಿಲ್ದಾಣ ಎದುರಿನ ಕೆನರಾ ಬ್ಯಾಂಕ್ ಕೆಳಗೆ ಮಹೇಶ್ ಪ್ಲಾಜ್ ನೆಲಮಹಡಿಯಲ್ಲಿ ಲಂಚದ ಹಣ ಪಡೆಯುವಾಗ ಯಶಸ್ವಿ ಕಾರ್ಯಾಚರಣೆ ನಡೆಸಿ ಟ್ರ್ಯಾಪ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ಮಾರ್ಗದರ್ಶನದಲ್ಲಿ ,ಲೋಕಾಯುಕ್ತ ಇನ್ಸ್ ಪೆಕ್ಟರ್ ಆಂಜನೇಯ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಚಂದ್ರಶೇಖರ್, ವೀರೇಶಯ್ಯ, ಸುರೇಶ್, ಧನ್‍ರಾಜ್, ಲಿಂಗೇಶ್, ಮೋಹನ್, ಬಸವರಾಜ್, ಹಾಗೂ ವಿನಾಯಕ ಸೇರಿದಂತೆ ಮತ್ತಿತರಿದ್ದರು.