ಸುದ್ದಿವಿಜಯ, ಜಗಳೂರು: ತಾಲೂಕಿನ ಕಲ್ಲೇದರಪರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ಪತ್ರಿಕಾ ಸಾಗಾಣೆ ವಾಹನದ ಮೇಲೆ ವ್ಯಕ್ತಿಯೊಬ್ಬ ಕಲ್ಲು ತೂರಾಟ ನೆಡೆಸಿದ್ದು, ಪ್ರಶ್ನಿಸಿದ್ದಕ್ಕೆ ವಾಹನ ಚಾಲಕ ಸಿದ್ದಪ್ಪ (55)ಎಂಬುವರ ಮೇಲೆ ಕಲ್ಲಿನಿಂದ ತಲೆಗೆ ರಕ್ತಬರುವಂತೆ ಕುಟ್ಟಿ, ಬಲಗೈನ ಮೂಳೆ ಮುರಿಯುವಂತೆ ಹೊಡೆದಿದ್ದಾನೆ.
ತಮಿಳು ಭಾಷೆ ಮಾತನಾಡುತ್ತಿದ್ದ ವ್ಯಕ್ತಿಯಿಂದ ಹಲ್ಲೆಯಾಗಿದೆ ಎಂದು ಹಲ್ಲೆಗೊಳಗಾದ ಸಿದ್ದಪ್ಪ ಜಗಳೂರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ಎಂದಿನಂತೆ ಕಲ್ಲೇದೇವರಪುರ ಗ್ರಾಮಕ್ಕೆ ಪತ್ರಿಕೆ ಬಂಡಲ್ ಇಳಿಸಲು ಹೋದಾಗ ಅನಾಮದೇಯ ವ್ಯಕ್ತಿಯೋರ್ವ ಏಕಾ ಏಕಿ ಕಾರಿನ ಗ್ಲಾಸ್‍ಗೆ ಕಲ್ಲುತೂರಿದ್ದಾನೆ. ಹೀಗಾಗಿ ಕಾರಿನ ಗಾಜು ಪುಡಿಯಾಗಿದೆ. ತಕ್ಷಣ ಚಾಲಕ ಇಳಿದು ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಕೈಯಲ್ಲಿದ್ದ ಕಲ್ಲಿನಲ್ಲಿ ತಲೆ ಮತ್ತು ಕೈಗೆ ರಕ್ತ ಬರುವಂತೆ ಕುಟ್ಟಿದ್ದಾನೆ.
ತಕ್ಷಣ ಸ್ಥಳೀಯರು ಆ ವ್ಯಕ್ತಿಯನ್ನು ಹಿಡಿದು ಗಸ್ತಿನಲ್ಲಿದ್ದ ಜಗಳೂರು ಪಟ್ಟಣದ ಹೊಯ್ಸಳ ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೂ ಹಲ್ಲೆಗೆ ಯತ್ನ ನಡೆಸಿದ್ದಾನೆ.
ತಕ್ಷಣ ಆತನ ಕೈ-ಕಾಲುಗಳನ್ನು ಕಟ್ಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆತ ಕಳೆದ ಎರಡು ದಿನಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಸಿಕ್ಕ ಸಿಕ್ಕ ಸಾರ್ವಜನಿಕರ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೈದ್ಯರು ಆತನನ್ನು ಪರೀಕ್ಷಿಸಿದಾಗ ಮಾನಸೀಕ ಅಸ್ವಸ್ಥನಂತೆ ಕಾಣುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ಕಳುಹಿಸಿಲಾಯಿತು ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಸಹ ಆತನ ಮೇಲೆ ಎಫ್‍ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಪಿಎಸ್‍ಐ ಡಿ.ಸಾಗರ್ ಮಾಹಿತಿ ನೀಡಿದರು. ಅವರು ಹೇಳುವ ಪ್ರಕಾರ ಮಾನಸಿಕ ಅಸ್ವಸ್ಥನಂತೆ ಕಾಣುವ ವ್ಯಕ್ತಿಯು ಹಲ್ಲೆ ಮಾಡಿದಾಗ ವರದಿ ಬರುವವರೆಗೂ ಕಾನೂನು ರೀತಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.
ದಾವಣಗೆರೆ ವೈದ್ಯರು ಅಧಿಕೃತ ವರದಿ ನೀಡುವವರೆಗೂ ಆ ವ್ಯಕ್ತಿಯ ಮೇಲೆ ಎಫ್‍ಐಆರ್ ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.