ಸುದ್ದಿವಿಜಯ, ಜಗಳೂರು: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಾಲೂಕಿನ ಅನೇಕ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಕಟಾವು ಮಾಡಿದ ಮೆಕ್ಕೆಜೋಳವನ್ನು ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುವ ವರ್ಷ ಅತ್ಯಧಿಕ ಮಳೆಯಿಂದ ಗುಣಮಟ್ಟದ ಮೆಕ್ಕೆಜೋಳ ಬೆಳೆದ ರೈತರಿಗೆ ಸೈಕ್ಲೋನ್ ಎಫೆಕ್ಟ್ ತೀರಾ ತೊಂದರ ಉಂಟುಮಾಡಿದೆ. ಹೊಲ ಮತ್ತು ಕಣಗಳಲ್ಲಿ ರಾಶಿ ಹಾಕಿಕೊಂಡಿರುವ ರೈತರು ಅವುಗಳನ್ನು ಒಕ್ಕಣೆ ಮಾಡಲು ಸಮಯ ಕೊಡದೇ ಮಳೆ ಅಡ್ಡಿ ಉಂಟು ಮಾಡುತ್ತಿದೆ.
ತಾಲೂಕಿನ ಬಿದರಕೆರೆ, ತೋರಣಗಟ್ಟೆ, ಕಲ್ಲೇದೇವರಪುರ, ದೊಣೆಹಳ್ಳಿ, ಮುಸ್ಟೂರು, ಕೆಚ್ಚೇನಹಳ್ಳಿ, ಹನುಮಂತಾಪುರ, ಬಿಳಿಚೋಡು, ದೇವಿಕೆರೆ, ಗುತ್ತಿದುರ್ಗ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಅನೇಕ ಹಳ್ಳಿಗಳಲ್ಲಿ ಇನ್ನೂ ಮೆಕ್ಕೆಜೋಳದ ಒಕ್ಕಣೆಗೆ ಕೈ ಹಾಕಿಲ್ಲ. ಅಧಿಕ ಮಳೆಯಿಂದ ತಾಡಪತ್ರಿಗಳನ್ನು ಹೊದಿಸಿ ರೈತರು ಮೆಕ್ಕೆಜೋಳ ರಾಶಿಗಳನ್ನು ಸಂರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.
ಮಳೆಯಿಂದ ಖರೀದಿದಾರರೂ ಮೆಕ್ಕೆಜೋಳ ಖರದೀ ಮಾಡಲು ಬರುತ್ತಿಲ್ಲ. ಅಧಿಕ ಮಾಶ್ಚರ್ (ಉಷ್ಣಾಂಶ ಕಡಿಮೆ)ಬರುತ್ತಿರುವ ಕಾರಣ ಖರೀದಿದಾರು ಕೊಳ್ಳಲು ಮುಂದಾಗುತ್ತಿಲ್ಲ. ಹೀಗಾಗಿ ಮಳೆಯಿಂದ ತೊಯ್ದು ತೊಪ್ಪೆಯಾಗಿರುವ ಮೆಕ್ಕೆಜೋಳದ ತೆನೆಗಳಲ್ಲಿ ಫಂಗಸ್ ಪ್ರಮಾಣ ಹೆಚ್ಚಾಗುತ್ತಿದೆ.
ಕಡಲೆ ಬೆಳೆಗೂ ಕುತ್ತು!:
ವಾರ್ಷಿಕ ಎರಡು ಬೆಳೆಗಳನ್ನು ಬೆಳೆಯಬಹುದಾದ ವೈವಿದ್ಯಮಯ ಪರಿಸರ ಇರುವ ಜಗಳೂರು ತಾಲೂಕಿನಲ್ಲಿ ಈ ಬಾರಿ ಅಂದಾಜು 4000 ಹೆಕ್ಟೇರ್ಗೂ ಹೆಚ್ಚು ಹಿಂಗಾರಿ ಹಂಗಾಮಿನಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ. ಆದರೆ ಕಡಲೆಗೆ ಹೆಚ್ಚು ನೀರಿನ ಅವಶ್ಯಕತೆಯಿಲ್ಲ.
ಬಿತ್ತನೆ ಮಾಡುವಾಗ ತೇವಾಂಶವಿದ್ದರೆ ಸಾಕು. ಹುಟ್ಟಿದ ನಂತರ ಡಿಸೆಂಬರ್ ಜನವರಿಯಲ್ಲಿ ಬೀಳುವ ಬೆಳಗಿನ ಮಂಜು ಮುಸುಕಿದ ವಾತಾವರಣಕ್ಕೆ ಕಡಲೆ ಉತ್ಕøಷ್ಟವಾಗಿ ಬೆಳೆಯುತ್ತದೆ. ಆದರೆ ಜಿಟಿ ಜಿಟಿ ಸುರಿಯುತ್ತಿರುವ ಮಳೆಯಿಂದ ಕಡಲೆಯ ಉಳಿ ನೀರಿನಲ್ಲಿ ಇಳಿದು ಹೋಗುವ ಕಾರಣ ಕಡಲೆ ಹೂ ಬಿಡುವುದು ಮತ್ತು ಕಾಯಿ ಕಟ್ಟುವುದು ಕಡಿಮೆಯಾಗುತ್ತದೆ. ಜೊತೆಗೆ ಕಾಯಿ ಕೊರಕ ರೋಗದ ಹುಳು ಬಾಧೆ ಹೆಚ್ಚಾಗುತ್ತಿದೆ. ಹೀಗಾಗಿ ಕಡಲೆ ಉತ್ಪಾದನೆ ಕುಂಠಿತವಾಗುವ ಸಾಧ್ಯತೆ ಹೆಚ್ಚಿದೆ.
ಮೆಕ್ಕಜೋಳದ ತೆನೆಗಳು ಫಂಗಸ್!
ಅಧಿಕ ಮಳೆಯಿಂದ ನಮ್ಮ ಹೊಲದಲ್ಲಿ ಬೆಳೆದಿರುವ ಮೆಕ್ಕೆಜೋಳದ ಕಟಾವು ಮಾಡಿ ಅದನ್ನು ಒಕ್ಕಣೆ ಮಾಡಲು ಸಾಧ್ಯವಾಗಿಲ್ಲ. ಅಂದಾಜು 1000 ಕ್ವಿಂಟಾಲ್ ಮೆಕ್ಕೆಜೋಳಕ್ಕೆ ತಾಟಪಾಲುಗಳನ್ನು ಮುಚ್ಚಿ ಸಂರಕ್ಷಣೆ ಮಾಡುತ್ತಿದ್ದೇವೆ. ಆದರೂ ರಾಶಿಯ ಅಡಿಗೆ ಮಳೆ ನೀರು ಹೋಗಿ ಮೆಕ್ಕಜೋಳದ ತೆನೆಗಳು ಫಂಗಸ್ ಬರುತ್ತಿವೆ.
-ಜಿ.ಎಸ್.ಬಸವನಗೌಡ, ಗುತ್ತಿದುರ್ಗ ಗ್ರಾಮದ ರೈತ