ಸುದ್ದಿವಿಜಯ, ಜಗಳೂರು: ಅಡಕೆ ಮಧ್ಯೆ ಎಲೆ ಕೋಸು ನಾಟಿ ಮಾಡಿದ್ದ ರೈತನಿಗೆ ಕೋಸು ಲಾಸಾಗಿ ಮಾಡಿದ ಖರ್ಚು ಬಾರದೇ ಸಾಲದ ಸುಳಿಯಲ್ಲಿ ಅನ್ನದಾತರು ಸಿಲುಕಿ ಒದ್ದಾಡುತ್ತಿದ್ದಾರೆ.
ತಾಲೂಕಿನ ಅರಿಶಿಣಗುಂಡಿ, ಲಿಂಗಣ್ಣನಹಳ್ಳಿ, ಜಮ್ಮಾಪುರ, ಕಟ್ಟಿಗೆಹಳ್ಳಿ, ರಸ್ತೆ ಮಾಕುಂಟೆ, ಬಿಸ್ತುವಳ್ಳಿ, ಬಿದರಕೆರೆ, ತೋರಣಗಟ್ಟೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪ್ರಸ್ತುತ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಅಡಕೆ ನಾಟಿ ಮಾಡಲಾಗಿದೆ. ಅಡಕೆಯಲ್ಲಿ ಅಂತರ್ ಬೇಸಾಯವಾಗಿ ಎಲೆ ಕೋಸು ಉತ್ತಮ ಬೆಳೆ ಎಂದು ಆಯ್ಕೆ ಮಾಡಿಕೊಂಡ ರೈತನಿಗೆ ಕೋಸು ಕಾಸಿಲ್ಲಂತೆ ಮಾಡಿದೆ.
ಅರಿಶಿಣಗುಂಡಿ ಗ್ರಾಮದ ರೈತ ಸಿದ್ದೇಶ್ ತಮ್ಮ ಎರಡು ಎಕರೆ ಅಡಕೆ ನಾಟಿ ಮಾಡಿದ ಜಮೀನಿನಲ್ಲಿ ಅಂದಾಜು 25 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಎಲೆ ಕೋಸು ಸಸಿಗಳನ್ನು ನಾಟಿ ಮಾಡಿದ್ದರು. ಗೊಬ್ಬರ, ಕಳೆ ನಿರ್ವಹಣೆ, ಔಷಧೋಪಚಾರ, ಬೇಸಾಯ ನಿರ್ವಹಣೆ ಸೇರಿದಂತೆ ಅಂದಾಜು 50 ಸಾವಿರ ಖರ್ಚು ಮಾಡಿದ್ದ ರೈತನಿಗೆ ಕೋಸಿನಿಂದ ಒಂದೇ ಒಂದು ರೂ. ಆದಾಯ ಬಾರದಂತಾಗಿದೆ.
ಕೊಳ್ಳುವವರಿಲ್ಲದೇ ಕೊಳೆಯುತ್ತಿರುವ ಕೋಸು: ದರವಿದ್ದಾಗ ಹೊಲಗಳಿಗೆ ಬಂದು ಖರೀದಿಸುತ್ತಿದ್ದ ವರ್ತಕರು ದರ ಕುಸಿತ ಹಿನ್ನೆಲೆ ಇತ್ತಕಡೆ ಮುಖ ಮಾಡಿಲ್ಲ. ಕೆಜಿಗೆ 1 ರೂ ನಂತೆಯೂ ಕೇಳುತ್ತಿಲ್ಲ. ಹೀಗಾಗಿ ಗಡ್ಡೆಗಳು ಬಾಡಲಾರಂಬಿಸಿವೆ. ಎಲೆಗಳನ್ನು ಹುಳುಗಳು ಮುಕ್ಕುತ್ತಿವೆ. ಅಂದಾಜು 1 ಲಕ್ಷ ಖರ್ಚು ಮಾಡಿದ್ದ ರೈನಿಗೆ ನಯಾಪೈಸೆ ಬಾರದೇ ಇರೋದು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಕೋಸು ಲಾಟರಿಯಿದ್ದಂತೆ. ಬಂದ್ರೆ ಬಂತು ಹೋದ್ರೆ ಹೋಯ್ತು. ಆದರೆ ಈ ವರ್ಷ ಮಾತ್ರ 1 ರೂಗೂ ಕೇಳಲು ಬಾರದ ವರ್ತಕರಿಂದ ಹಾಕಿದ ಬಂಡವಾಳವೂ ಕೈಗೆ ಸಿಗದೇ ಕೋಸು ಲಾಸು ಮಾಡಿದೆ.
-ಸಿದ್ದೇಶ್, ಅರಿಶಿಣಗುಂಡಿ ಗ್ರಾಮದ ಯುವ ರೈತ