ಸುದ್ದಿವಿಜಯ, ಜಗಳೂರು: ಮನರೇಗಾದಲ್ಲಿ ನಡೆದಿರುವ ಭ್ರಷ್ಟಾಚಾರ ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಕೊಲೆಯಾದ ಶನಿವಾರ ಸಂಜೆ ಮತ್ತು ಭಾನುವಾರ ರಾತ್ರಿ 10.30ರ ಸಮಯದಲ್ಲಿ ಎಚ್.ಎಂ.ಹೊಳೆ ಗ್ರಾಪಂನ ಪಿಡಿಓ ಎ.ಟಿ.ನಾಗರಾಜ್ ಹಣ ಡ್ರಾ ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯರು, ಗ್ರಾಮಸ್ಥರು ಮಂಗಳವಾರ ದೂರು ತಾಪಂ ಇಓಗೆ ದೂರು ನೀಡಿದರು.
ಕೊಲೆಯ ಎ1 ಆರೋಪಿ ಎ.ಟಿ.ನಾಗರಾಜ್ ಕ್ರಿಯಾ ಯೋಜನೆ ತಯಾರಿಸದೇ, ಸಾಮಾನ್ಯ ಸಭೆಯಲ್ಲಿ ಚರ್ಚಿಸದೇ ಸದಸ್ಯರ ಗಮನಕ್ಕೆ ಬಾರದೇ ಅಧ್ಯಕ್ಷೆ ಶಿವರುದ್ರಮ್ಮ ಹಾಗೂ ಕಂಪ್ಯೂಟರ್ ಆಪರೇಟರ್ ಶ್ವೇತಾ ಜೊತೆ ಸೇರಿ ಒಟ್ಟು 21 ಲಕ್ಷ ಬಿಡುಗಡೆ ಮಾಡಿಕೊಂಡಿದ್ದಾರೆ.
15ನೇ ಹಣಕಾಸು ಯೋಜನೆ ಅಡಿ ಏಕಪಕ್ಷೀಯವಾಗಿ ಡಾಂಗಲ್ ಬಳಸಿ ಕುಂತಲ್ಲೇ ನಕಲಿ ವೆಂಡರ್ಗೆ ಹಣ ವರ್ಗಾವಣೆ ಮಾಡಿದ್ದಾರೆ. ಯಾವುದೇ ಕಾಮಗಾರಿ ಮಾಡದೇ ಬೋಗಸ್ ಬಿಲ್ ಸೃಷ್ಟಿಸಿ ಹಣ ಡ್ರಾ ಮಾಡಿದ್ದಾರೆ ಎಂದು ಗ್ರಾಪಂ ಸದಸ್ಯ ರಂಗಪ್ಪ, ಶರಣಪ್ಪ, ಶಿವಣ್ಣ, ಕಲೀಲ್ ಸಾಬ್, ವೀರೇಶ್, ಎಚ್.ಸಿ.ನಾಗರಾಜಯ್ಯ, ರತ್ನಮ್ಮ ಮಲ್ಲಾಪುರ, ನಾರಾಯಣರೆಡ್ಡಿ ಸೇರಿದಂತೆ ಅನೇಕರು ಎ.ಟಿ.ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಮಲೇಹಳ್ಳಿ ಗ್ರಾಮದ ಲೋಕೇಶ್ ಮಾತನಾಡಿ, ಭ್ರಷ್ಟಾತಿ ಭ್ರಷ ಪಿಡಿಓ ನಾಗರಾಜ್ ಮಾಡಿರುವ ಅಕ್ರಮ ಹೇಳತೀರದು. ನಮ್ಮ ಗ್ರಾಪಂಗೆ ಆದ ಅನ್ಯಾಯ ಇನ್ನೊಬ್ಬರಿಗೆ ಆಗಬಾರದು. ಕೊಳ್ಳೆ ಹೊಡೆದು ಖಜಾನೆ ಖಾಲಿ ಮಾಡಿದ್ದಾರೆ. ಇಒ ಚಂದ್ರಶೇಖರ್ ಸೇರಿದಂತೆ ಜಿ.ಪಂ ಸಿಇಓ ಡಾ.ಚನ್ನಪ್ಪ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎ.ಟಿ.ನಾಗರಾಜ್ ವಿರುದ್ಧ ಸೂಕ್ತ ಕ್ರಮ!
ಎಚ್.ಎಂ ಹೊಳೆ ಮತ್ತು ಗುರುಸಿದ್ದಾಪುರ ಹಾಗೂ ಗುತ್ತಿದುರ್ಗ ಗ್ರಾಪಂಗೆ ಸಂಬಂಧಿಸಿದಂತಹ ಎಲ್ಲಾ ಬ್ಯಾಂಕ್ ಖಾತೆಗಳನ್ನು ಕೂಡಲೇ ಸ್ಥಗಿತಗೊಳಿಸಲಾಗಿದೆ. ಎ.ಟಿ ನಾಗರಾಜ್ ಅವರು ಶನಿವಾರ ಮತ್ತು ಭಾನುವಾರ ಡ್ರಾ ಮಾಡಿರುವುದು ತಿಳಿದು ಬಂದಿದೆ. ಹಣ ಪಾವತಿಯಾಗಿರುವ ವೆಂಡರ್ಗಳು ನಮ್ಮಿಂದ ತಪ್ಪಾಗಿದೆ ಹಣವನ್ನು ಸರಕಾರದ ಖಾತೆಗೆ ಜಮೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಎ.ಟಿ.ನಾಗರಾಜ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಚಂದ್ರಶೇಖರ್, ಇಓ ತಾಪಂ ಜಗಳೂರು.