ಸುದ್ದಿವಿಜಯ, ಜಗಳೂರು: ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ವಂಚಿತರಾಗಿರುವ ಅರಸಿಕೆರೆ ಹೋಬಳಿಯ ಏಳು ಗ್ರಾಪಂಗಳ ನೂರಕ್ಕೂ ಹೆಚ್ಚುಜನರು ಎಎಪಿ ಮುಖಂಡರಾದ ಗೋವಿಂದರಾಜ್, ಕಲ್ಲೇಶ್, ಜಗಳೂರು ತಾಲೂಕು ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ಗುರುವಾರ ಎಎಪಿ ಸೇರ್ಪಡೆಯಾದರು.
ಮೂಲಸೌಲಭ್ಯಗಳಿಂದ ವಂಚಿತರಾಗಿರುವ ಜಗಳೂರು, ಹರಪಹಳ್ಳಿ ಎರಡು ವಿಧಾನಸಭೆ ಕ್ಷೇತ್ರಗಳ ಮಧ್ಯೆ ಇರುವ ಉಚ್ಚಂಗಿದುರ್ಗ, ಚಟ್ನಳ್ಳಿ, ಅಣಜಿಗೆರೆ, ಪುಣಭಗಟ್ಟ, ತೌಡೂರು, ಅರಸಿಕೆರೆ, ಹೊಸಕೋಟೆ ಗ್ರಾಪಂಗಳ ಒಟ್ಟು 27ಕ್ಕೂ ಹೆಚ್ಚು ಹಳ್ಳಿಗಳಿಗೆ ಇಷ್ಟು ದಿನ ಆಳ್ವಿಕೆ ನಡೆಸಿದ ಯಾವ ಶಾಸಕರೂ ಏನೂ ಕೆಲಸ ಮಾಡಿಲ್ಲ.
ಎನ್‍ಆರ್‍ಇಜಿ ಯೋಜನೆ ಕಾರ್ಮಿಕರಿಗೆ ಶಾಪವಾಗಿದೆ. ವಸತಿರಹಿತರಿಗೆ ನಿವೇಶನ ಸಿಕ್ಕಿಲ್ಲ. ಕೂಲಿ ಕೆಲಸ ಮಾಡುವ ಅನೇಕರಿಗೆ ಇದುವರೆಗೂ ಅಭಿವೃದ್ಧಿ ಮರೀಚಿಕೆಯಾಗಿದೆ. ವೋಟ್ ಮಾಡಿದ ಮೇಲೆ ನಮ್ಮನ್ನು ನಿರ್ಲಷ್ಯ ಮಾಡಲಾಗಿದೆ ಎಂದು ಆಪ್ ಸೇರಿದ ಅನೇಕರು ಆಕ್ರೋಶ ಹೊರಹಾಕಿದರು.
ಪುಣಘಟ್ಟೆ, ಬೂದಿಹಾಳ್ ಗ್ರಾಮಗಳಲ್ಲಿ ಕೂಲಿ ಕಾರ್ಮಿಕ ಜೊತೆ ಮತಪ್ರಚಾರ ನಡೆಸಿದ ಎಎಪಿ ಮುಖಂಡರಿಗೆ ಅಭೂತ ಪೂರ್ವ ಬೆಂಬಲವನ್ನು ಜನರು ನೀಡಿದರು. ಅರಸಿಕೆರೆ ಹೋಬಳಿಯ ಬ್ಲಾಕ್ ಎಎಪಿ ಅಧ್ಯಕ್ಷರ ಆಯ್ಕೆಯಾಗಿದ್ದು ಮಾ.4ರಂದು ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್ ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಂದು ಹೆಸರುಗಳನ್ನು ಘೋಷಣೆ ಮಾಡುವರು ಎಂದು ಎಎಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕಲ್ಲೇಶ್, ತಾಲೂಕು ಅಧ್ಯಕ್ಷ ನಾಗರಾಜ್ ತಿಳಿಸಿದರು.
ಎಎಪಿ ಬಿರುಸಿನ ಜನಜಾಗೃತಿ: ಅರಸಿಕೆರೆ ಹೋಬಳಿಯ 27ಹಳ್ಳಿಗಳಲ್ಲಿ ಎಎಪಿ ಮುಖಂಡರು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕಳೆದ ಮಂಗಳವಾರದಿಂದ ನಿರಂತರಾಗಿ ಒಂದುವಾರ ಏಳು ಗ್ರಾಪಂಗಳ ವ್ಯಾಪ್ತಿಯ 27 ಹಳ್ಳಿಗಳಿಗೆ ತೆರಳಿ ಅಭಿವೃದ್ಧಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿ ಸಂಚಾರಿಸಿ ಬಿರುಸಿನ ಪ್ರಚಾರ ಕೈಗೊಂಡು ಎಎಪಿ ಸಿದ್ಧಾಂತ ಮತ್ತು ಆಡಳಿತದ ವೈಫಲ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು.