ಸುದ್ದಿವಿಜಯ, ಜಗಳೂರು: ಬಿಜೆಪಿ ಪಕ್ಷದಲ್ಲಿ ನಾನೇ ಅಭ್ಯರ್ಥಿ. ಮುಂದೆ ನಿಮ್ಮ ಆಶೀರ್ವಾದದಿಂದ ಗೆದ್ದು ಶಾಸಕನಾಗುತ್ತೇನೆ. ಹೊಸ ಆಕಾಂಕ್ಷಿ ಹುಟ್ಟಿಕೊಂಡಿದ್ದಾರೆ, ರಾಮಣ್ಣನಿಗೆ ಟಿಕೆಟ್ ಮಿಸ್ ಆಗುತ್ತಂತೆ ಎಂಬ ಊಹಾಪೋಹ ಬೇಡ. ಎಲ್ಲೋ ಇದ್ದುಕೊಂಡು ಈಗ ಟಿಕೆಟ್ ಬೇಕೆಂದರೆ ಬಿಟ್ಟುಕೊಡಲು ಹೇಗೆ ಸಾಧ್ಯ ಎಂದು ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ಶಾಸಕ ಎಸ್.ವಿ.ರಾಮಚಂದ್ರ ಕುಟುಕಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ಸಂಜೆ ತಾಲೂಕು ಬಿಜೆಪಿ ಘಟಕದಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷದ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಕ್ಷದಲ್ಲಿ ಮೂವತ್ತು ವರ್ಷಗಳಿಂದಲೂ ಪ್ರಾಮಾಣಿಕವಾಗಿ ಕೆಲಸ ಮಾಡುವ ನಮ್ಮವರು ಯಾರೇ ಬರಲಿ, ನಾನು ಜಾಗ ಬಿಟ್ಟುಕೊಡುತ್ತೇನೆ. ಆದರೆ ಎಲ್ಲೋ ಇದ್ದುಕೊಂಡು ಈಗ ಟಿಕೆಟ್ ಬೇಕೆಂದು ಬಂದರೆ ಬಿಟ್ಟುಕೊಡಲು ಸಾಧ್ಯವಿಲ್ಲ. ಇದಕ್ಕೆ ಕಾರ್ಯಕರ್ತರು, ಮತದಾರರೇ ಉತ್ತರಿಸುತ್ತಾರೆ ಎಂದು ಶಾಸಕ ಎಸ್.ವಿ ರಾಮಚಂದ್ರ ಗುಡುಗಿದರು.
ಕ್ಷೇತ್ರದಲ್ಲಿ ನಿಮ್ಮ ಮನೆಯ ಮಗನಾಗಿ ಕಷ್ಟ, ಸುಖ, ದುಃಖಗಳಲ್ಲಿ ಭಾಗಿಯಾಗಿ ಎಲ್ಲರನ್ನು ವಿಚಾರಿಸಿದ್ದೇನೆ. ನನ್ನ ಅವಯಲ್ಲಿ ಶಕ್ತಿ ಮೀರಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ವಿರೋಧ ಪಕ್ಷದವರು ಇಲ್ಲ ಸಲ್ಲದ ಮಾತುಗಳಿಗೆ ಕಿವಿಗೊಡದೇ ಪಕ್ಷದ ಗೆಲುವಿನ ಕಡೆ ಗಮನಹರಿಸಿ, ನಾನು ಮಾಡಿರುವ ಕೆಲಸಗಳು ಜನರ ಕಣ್ಣ ಮುಂದೆ ಇವೆ. ಮತ ಹಾಕಿ ಗೆಲ್ಲಿಸುವವರು ಮನೆಯಲ್ಲಿದ್ದಾರೆ ಎಂದರು.
ಚುನಾವಣೆ ಸನಿಹಕ್ಕೆ ಬಂದಿದ್ದು, ಪ್ರತಿ ಬೂತ್ ಮಟ್ಟದಿಂದಲೂ ಕಾರ್ಯಕರ್ತರು ಪಕ್ಷ ಸಂಘಟಿಸಿ ಗೆಲುವಿಗೆ ಶ್ರಮಿಸಬೇಕು ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಬಿಜೆಪಿ ಕ್ಷೇತ್ರ ಉಸ್ತುವಾರಿ ಆರುಂಡಿ ನಾಗರಾಜ್ ಮಾತನಾಡಿ, ಮಾಡಿದ ಅಭಿವೃದ್ಧಿ ಕೆಲಸಗಳು ಜನರ ಮನೆ ಬಾಗಿಲಿಗೆ ತಲುಪುದ ಹಿನ್ನೆಲೆ ವಾಜಪೇಯಿ ಅವರ ನಾಯಕತ್ವವವನ್ನು ಕಳೆದಕೊಳ್ಳಬೇಕಾಯಿತು. ಅಂತಹ ತಪ್ಪು ಈ ಕ್ಷೇತ್ರದಲ್ಲಿ ಆಗದಂತೆ ಮುಂಜಾಗ್ರತೆವಹಿಸಬೇಕು ಎಂದರು.
ಈ ಹಿಂದೆ ದಟ್ಟ ದರಿದ್ರ ರಾಷ್ಟ್ರ ಎಂದು ಕರೆಯಲಾಗುತ್ತಿತ್ತು ಆದರೆ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂದ ನಂತರ ಇಡೀ ವಿಶ್ವವೇ ಭಾರತದತ್ತಾ ನೋಡುವಂತಾಗಿದೆ. ನಮ್ಮ ಕಾರ್ಯಕರ್ತರು ಕೇವಲ ಚುನಾವಣೆಗಾಗಿ ಕೆಲಸ ಮಾಡುವವರಲ್ಲಾ, ನಿರಂತರ ಕಾರ್ಯೋನ್ಮುಖರಾಗಿ ಪಕ್ಷ ಕಟ್ಟುವಂತರಾಗಿದ್ದೇವೆ. ಸಣ್ಣಪಟ್ಟ ಮನಸ್ಥಾಪಗಳಿದ್ದರೇ ಕೈ ಬಿಟ್ಟು ಪಕ್ಷದ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕು ಎಂದರು.
ಕೇಂದ್ರ ಮತ್ತು ರಾಜ್ಯದ ಶಕ್ತಿ ಅಡಗಿರುವುದೇ ಬೂತ್‍ಗಳಲ್ಲಿ. ಹಾಗಾಗಿ ಬೂತ್ ಸಮಿತಿ ನಿರ್ಮಾಣವಾಗಬೇಕಾಗಿದ್ದು ಚುನಾವಣೆಯಲ್ಲಿ ಪ್ರತಿ ಬೂತ್‍ಗಳಲ್ಲೂ ಶೇ.52ರಷ್ಟು ಮತಗಳನ್ನು ಪಡೆದುಕೊಂಡರೇ ಬಿಜೆಪಿಯ ಬಾವುಟದ ಪತಾಕೆ ಹಾರಿಸಬಹುದು ಎಂದರು.
ಇದೇ ವೇಳೆ ವಿವಿಧ ಪಕ್ಷದ ಯುವ ಮುಖಂಡರುಗಳು ಶಾಸಕ ಎಸ್.ವಿ ರಾಮಚಂದ್ರ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಎಚ್.ಸಿ ಮಹೇಶ್, ಮಾಜಿ ಅಧ್ಯಕ್ಷ ಶಿವಕುಮಾರ್ ಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ, ಕಾರ್ಯದರ್ಶಿ ಎಚ್. ನಾಗರಾಜ್, ಮಾಜಿ ಜಿ.ಪಂ ಸದಸ್ಯ ಎಸ್.ಕೆ ಮಂಜುನಾಥ್, ಮಾಜಿ ತಾ.ಪಂ ಸದಸ್ಯ ಸಿದ್ದೇಶ್, ಪ.ಪಂ ಸದಸ್ಯರಾದ ಆರ್. ತಿಪ್ಪೇಸ್ವಾಮಿ, ಪಾಪಲಿಂಗಪ್ಪ, ಓಬಳೇಶ್, ವಿಎಸ್‍ಎಸ್‍ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಎಸ್ಸಿ ಮೋರ್ಚಾದ ಅಧ್ಯಕ್ಷ ರಾಜೇಶ್, ಮಹಿಳಾ ಘಟಕದ ಅಧ್ಯಕ್ಷರಾದ ಪದ್ಮ ಸೇರಿದಂತೆ ಮತ್ತಿತರಿದ್ದರು.