ಸುದ್ದಿವಿಜಯ, ಜಗಳೂರು: ಇದೇ ಫೆ.25ರಂದು ಆರಂಭವಾಗಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ಹೇಳಿದರು.
ಪಟ್ಟಣದ ಪ್ರೆಸ್‍ಕ್ಲಬ್‍ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 21 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡದ ಅಭಿವೃದ್ಧಿಗೆ ಶ್ರಮಿಸಿದ ತೋರಣಗಟ್ಟೆ ಗ್ರಾಮದ ಪ್ರೊ.ಎಚ್.ಲಿಂಗಪ್ಪ ಅವರನ್ನು ಸರ್ವಾನುಮತದಿಂದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದರು.
ಕನ್ನಡ ತೇರು ಎಳೆಯಲು ಕನ್ನಡಾಭಿಮಾನಿಗಳು ಉತ್ಸುಕರಾಗಿದ್ದಾರೆ. ಸಾಂಸ್ಕøತೀಕತೆಯ ವೈಭವದ ಕನ್ನಡದ ತೇರು ಎಳೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಡಾ.ಅಂಬೇಡ್ಕರ್ ವೃತ್ತದಿಂದ ಕಂಸಾಳೆ, ಜನಾಪದಕುಣಿತ, ಕಹಳೆ, ಡ್ರಮ್‍ಸೆಟ್ ಸೇರಿದಂತೆ ವಿವಿಧ ಜಾನಪದ ಕಲಾಪ್ರಕಾರಗಳ ಮೂಲಕ ಅಧ್ಯಕ್ಷರನ್ನು ಅದ್ಧೂರಿಯಾಗಿ ಮೆರವಣೆಗೆ ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆತರಲಾಗುವುದು.
ಬೆಳಿಗ್ಗೆ 7.30ಕ್ಕೆ ಕಸಾಪ ಜಿಲ್ಲಾಧ್ಯಕ್ಷರಾದ ವಾಮದೇವಪ್ಪ, ತಾಲೂಕು ಅಧ್ಯಕ್ಷರಾದ ಕೆ.ಸುಜಾತಮ್ಮರಾಜು, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವೇಳೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್.ವಿ.ರಾಮಚಂದ್ರ ವಹಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಮುಸ್ಟೂರು ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ, ಉದ್ಘಾಟನೆಯನ್ನು ಜನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ನೆರವೇರಿಸಲಿದ್ದಾರೆ.
ಅನುಭಾವಕವಿ ಮಹಾಲಿಂಗರಂಗ ವೇದಿಕೆಯನ್ನು ಸಂಸದ ಜಿ.ಎಂ.ಸಿದ್ದೇಶ್ವರ್ ನೆರವೇರಿಸಲಿದ್ದಾರೆ. ಭೀಮಪ್ಪನಾಯಕ ಮಹಾತ್ವಾರಕ್ಕೆ ಡಾ.ಜಿ.ಸಿದ್ದಪ್ಪ, ಚಂದ್ರಶೇಖರ್ ಶಾಸ್ತ್ರ ಮಂಟಪ್ಕೆ ಹಾಜಿ ಜೆ.ಕೆ.ಹುಸೇನ್ ಮಿಯ್ಯಾಸಾಬ್, ಇಮಾಂ ಮಹಾದ್ವಾರಕ್ಕೆ ಬಿ.ವಾಲಿಬಾಲ್ ತಿಮ್ಮಾರೆಡ್ಡಿ ಉದ್ಘಾಟಿಸಲಿದ್ದಾರೆ ಎಂದರು.
ಉದ್ಘಾಟನೆಯ ನಂತರ ಡಾ.ಲೋಕೇಶ್ ಅಗಸನಕಟ್ಟೆ, ಅಧ್ಯಕ್ಷತೆಯಲ್ಲಿ ಸಾಹಿತ್ಯ ಗೋಷ್ಠಿ, ಸಾಮಾಜಿಕ ಗೋಷ್ಠಿಯು ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪ್ರೊ.ಎಚ್.ಲಿಂಗಪ್ಪ ಅವರ ಬದುಕು ಬರಹ ಕುರಿತು ನಿವೃತ್ತ ಪ್ರಾಧ್ಯಾಪಕರಾದ ಎ.ಬಿ.ರಾಮಚಂದ್ರ ಮಾತನಾಡಲಿದ್ದಾರೆ.
ಊಟದ ನಂತರ ಡಿ.ಸಿ. ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ, ವೈದ್ಯಕೀಯ, ಕಲೆ, ಕೃಷಿ, ಸಂಸ್ಕøತಿ, ಜಾನಪದ, ಕುಶಲಕರ್ಮಿಗಳು ಸೇರಿದಂತೆ 20 ಕ್ಷೇತ್ರಗಳಲ್ಲಿ ಎಲೆ ಮರೆ ಕಾಯಿಯಂತೆ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಗುವುದು. ನಂತರ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಕಸಾಪ ತಾಲೂಕು ಅಧ್ಯಕ್ಷರಾದ ಸುಜಾತಮ್ಮರಾಜು ಮಾತನಾಡಿ, ಕನ್ನಡ ನಾಡು ನುಡಿ ಕಟ್ಟುವ ಕೆಲಸಕ್ಕೆ ಸಕಲರೂ ಕೈ ಜೋಡಿಸಬೇಕು. ಸತತ ಎರಡು ತಿಂಗಳಿಂದ ಸಮ್ಮೇಳನದ ಯಶಸ್ಸಿಗೆ ಅವಿರತವಾಗಿ ಎಲ್ಲರೂ ಶ್ರಮಿಸುತ್ತಿದ್ದೇವೆ.
ಸಣ್ಣಪುಟ್ಟ ಲೋಪಗಳಾಗಂತೆ ಎಚ್ಚರವಹಿಸಲಾಗಿದೆ. ಸರಕಾರಿ ನೌಕರರನ್ನೂ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಗಮಿಸಿದ್ದೇವೆ. ಯಾರನ್ನೂ ನಾವು ಕಡೆಗಣಿಸಿಲ್ಲ. ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಕ್ಷಮೆ ಕೇಳುತ್ತೇವೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕಾರಿ ಸಮಿತಿಯ ನಾಗಲಿಂಗಪ್ಪ ಮಾತನಾಡಿ, 1998ರ ನಂತರ ಜಿಲ್ಲೆ ಬೇರ್ಪಟ್ಟು ದಾವಣಗೆರೆ ಜಿಲ್ಲೆಗೆ ಸೇರಿದ ನಂತರ ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೇವೆ. ಎಲ್ಲ ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಕನ್ನಡ ಮನಸ್ಸುಗಳು ಕಾರ್ಯಕ್ರಮಕ್ಕೆ ಆಗಮಿಸಬೇಕು. ಅಂದು ಶಿಕ್ಷಕರಿಗೆ ಒಒಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ವೇಳೆ ಪವನ್ ಗ್ಯಾಸ್ ಮಾಲೀಕ ಓಬಣ್ಣ, ಬೆಲ್ಲದ ಬಸವರಾಜ್, ಚಂಪಾವತಿ, ಮಾರಪ್ಪನಾಯಕ ಸೇರಿದಂತೆ ಅನೇಕರು ಇದ್ದರು.