ಸುದ್ದಿವಿಜಯ, ಜಗಳೂರು: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಕಾರದ ಬೆಂಬಲ ಬೆಲೆಯೊಂದಿಗೆ ಸಂಕರ್ಷಣಾ ರೈತ ಉತ್ಪಾದಕ ಸಂಘದಿಂದ ಕಡಲೆ ನೋಂದಿಣಿ ಮತ್ತು ಖರೀದಿ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಾಲಶೇಖರ್ ಅವರು ಸೋಮವಾರ ಚಾಲನೆ ನೀಡಿದರು.
ಚಾಲನೆ ನಂತರ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಬಾಲಶೇಖರ್, ಜಗಳೂರು ತಾಲೂಕಿನಲ್ಲಿ ವೈವಿಧ್ಯಮಯ ವಾತಾವರಣ ವಿರುವ ಕಾರಣ ದ್ವಿದಳ ಧಾನ್ಯಗಳ ಬೆಳೆಗಳಿಗೆ ಪೂರಕವಾದ ಪರಿಸರವಿದೆ.
ರಾಜ್ಯ ಸರಕಾರ ಒಬ್ಬ ರೈತನಿಂದ 1 ಎಕರೆಗೆ ನಾಲ್ಕು ಕ್ವಿಂಟಲ್ ನಂತೆ ಗರಿಷ್ಠ 15 ಕ್ವಿಂಟಾಲ್ ಖರೀದಿಗೆ ಅವಕಾಶ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಪ್ರಸ್ತುತ 4600 ರೂ ಪ್ರತಿ ಕ್ವಿಂಟಾಲ್ ಕಡಲೆಗೆ ಬೆಲೆಯಿದೆ. ಸರಕಾರ ಪ್ರತಿ ಕ್ವಿಂಟಲ್ ಕಡಲೆಗೆ 5335 ರೂಗಳನ್ನು ನಿಗದಿ ಪಡಿಸಲಾಗಿದೆ. ಜಗಳೂರು ತಾಲೂಕಿನಲ್ಲಿ ಅಂದಾಜು 4000 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು ರೈತರು ಸಂರಕ್ಷಣಾ ರೈತ ಉತ್ಪಾದಕ ಕಂಪನಿಯ ಮೂಲಕ ಕಡಲೆ ಮಾರಾಟ ಮಾಡಬಹುದು.
ಕಡಲೆ ಮಾರಾಟಕ್ಕೂ ಮುನ್ನ ರೈತರು ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಬುಕ್ ವಿವರಗಳನ್ನು ಆನ್‍ಲೈನ್‍ನಲ್ಲಿ ರಿಜಿಸ್ಟೇಷನ್ ಮಾಡಿಸಬೇಕು. ನಂತರ ನಕಲು ಪ್ರತಿಯನ್ನು ಎಪಿಎಂಸಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಡಲೆ ಮಾರಾಟ ಮಾಡಬಹುದು. ಮಾರಾಟ ಮಾಡುವ ರೈತರು 50.540 ಕೆಜಿ (ಚೀಲದ ತೂಕ) ತೂಕ ಮಾಡಿಕೊಡಬೇಕು.
ಅಮಾಲರಿಗೆ ಸರಕಾರದಿಂದ ಹಣ ಕೊಡುತ್ತೇವೆ. ಅಮಾಲರು ರೈತರಿಂದ ಕಡಲೆ ಸ್ಯಾಂಪ್ ರೂಪದಲ್ಲಿ ಬಾಚಿಕೊಳ್ಳುವ ಯತ್ನ ಮಾಡುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂರಕ್ಷಣಾ ಎಫ್‍ಪಿಒ ಅಧ್ಯಕ್ಷ ರಮೇಶ್ ಮಾತನಾಡಿ, ಕಡಲೆ ಬೆಳೆದ ರೈತರಿಗೆ ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಿದೆ. ಎಫ್‍ಪಿಓಗಳ ಮೂಲಕ ಮಾರಾಟ ಮಾಡಿದರೆ ಹೆಚ್ಚು ಸೂಕ್ತವಾಗುತ್ತದೆ. ಈಗಾಗಲೇ ಸಂರಕ್ಷಣಾ ರೈತ ಉತ್ಪಾದಕ ಕಂಪನಿಯು ರೈತರಿಗೆ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಜಿಲ್ಲಾ ಮ್ಯಾನೇಜರ್ ಶ್ರೀಕಾಂತ್ ಮಾತನಾಡಿ, ಗುಣಮಟ್ಟದ ಕಡಲೆಯನ್ನು ರೈತರು ಸ್ವಚ್ಛ ಮಾಡಿಕೊಂಡು ತಂದರೆ ಹೆಚ್ಚು ಉಪಯೋಗವಾಗುತ್ತದೆ. ಇಲ್ಲವಾದರೆ ಮತ್ತೊಮ್ಮೆ ಕ್ಲೀನಿಂಗ್ ಮಾಡಲು ಹೆಚ್ಚು ಖರ್ಚಾಗುತ್ತದೆ. ಹಾಗಾಗಿ ಸ್ವಚ್ಛತೆಗೆ ಆದ್ಯತೆ ಕೊಡಿ ಎಂದು ರೈತರಿಗೆ ಮಾಹಿತಿ ನೀಡಿದರು.
ಸಂರಕ್ಷಣಾ ಸಿಇಓ ಮನೋಜ್, ಬಳಗೇರ ಮಂಜಣ್ಣ, ಶ್ರೀಧರ್, ನಾಗಭೂಷಣ ಶೆಟ್ಟಿ, ತಿಪ್ಪೇಸ್ವಾಮಿಗೌಡ, ಮುಸ್ಟೂರು ಎಫ್‍ಪಿಓ ಅಧ್ಯಕ್ಷ ಜಿ.ಎನ್.ಮಂಜುನಾಥ್, ನಿರ್ದೇಶಕರಾದ ಶಿವಶಂಕರ್, ಪುಟ್ಟಣ್ಣಗೌಡ, ಎಪಿಎಂಸಿ ಮ್ಯಾನೇಜರ್ ಶಂಕರ್, ಪ್ರದೀಪ್ ಸೇರಿದಂತೆ ನೂರಾರು ಜನ ರೈತರು ಉಪಸ್ಥಿತರಿದ್ದರು.