ಸುದ್ದಿವಿಜಯ, ಜಗಳೂರು: ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಚರಂಡಿ ಸ್ವಚ್ಛಗೊಳಿಸುವಾಗ ವಿಷಗಾಳಿ ಸೇವಿಸಿ ಪೌರಕಾರ್ಮಿಕರಾದ ಗ್ರಾಮದ ಡಿ.ಸತ್ಯಪ್ಪ (43) ಹಾಗೂ ಎನ್.ಮೈಲಪ್ಪ (42) ಮೃತಪಟ್ಟ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಬಸವನಕೋಟೆ ಗ್ರಾಪಂ ಪಿಡಿಓ ಶಶಿಧರ್ ಆದೇಶದ ಮೇರೆಗೆ ಯುಗಾದಿ ಹಬ್ಬದ ಹಿನ್ನೆಲೆ ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಗಲೀಜು ನೀರು ತುಂಬಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸುವಾಗ ಈ ದುರಂತ ಸಂಭವಿಸಿದೆ.
ಸುಮಾರು ಒಂದುವರೆ ವರ್ಷಗಳಿಂದ ಅಶುದ್ಧ ನೀರು ಕಟ್ಟಿಕೊಂಡು ಗಬ್ಬು ನಾರುತ್ತಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಿರಲಿಲ್ಲ. ಇದರಿಂದ ಬಹುದಿನಗಳಿಂದ ತುಂಬಿ ತುಳುಕುತ್ತಿದ್ದ ಚರಂಡಿಯ ಸ್ವಚ್ಚತೆಗೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸತ್ಯಪ್ಪ ಮತ್ತು ಮೈಲಪ್ಪ ಮುಂದಾಗಿದ್ದರು.
ಚರಂಡಿ ಸ್ವಚ್ಚಗೊಳಿಸುವಾಗ ವಿಷ ಗಾಳಿ ಸೇವಿಸಿ ಅಸ್ವಸ್ಥರಾದ ಕಾರ್ಮಿಕರನ್ನ ಹತ್ತಿರದ ಅರಸಿಕೆರೆ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಿ ಬಳಿಕ ಸ್ಥಿತಿ ಗಂಭೀರವಾದ ಹಿನ್ನೆಲೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೇ ಇಬ್ಬರು ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ.
ಪಂಚಾಯಿತಿ ಕಚೇರಿ ಮುಂದೆ ಜನಸಾಗರ:
ಕರ್ತವ್ಯಕ್ಕೆ ಸರಿಯಾಗಿ ಬಾರದ ಪಿಡಿಓ ಶಶಿಧರ್‍ಪಾಟೀಲ್ ಬೇಜಾವಾಬ್ದಾರಿಯಿಂದ ಎರಡು ಜೀವಗಳು ಬಲಿಯಾಗಿವೆ. ಎರಡು ಕುಟುಂಬಗಳಿಗೆ ಆಧಾರವಾಗಿದ್ದವರನ್ನ ಕಳೆದುಕೊಂಡು ಮನೆಯವರು ಆಘಾತಕ್ಕೀಡಾಗಿ ಸರಕಾರ ಮತ್ತು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ದರ್ಪಕ್ಕೆ ಅಮಾಯಕ ಎರಡು ಜೀವ ಬಲಿಯಾಗಿದೆ. ಕಟ್ಟಿಕೊಂಡು ನೀರು ಬಹಳ ದಿನಗಳಿಂದ ಚರಂಡಿಯಲ್ಲಿ ಉಳಿದ ಕಾರಣ ಅಪಾರ ಪ್ರಮಾಣದ ತ್ಯಾಜ್ಯ ಕಟ್ಟಿಕೊಂಡು ಕೊಳೆತಿದ್ದು, ವಿಷಕಾರಿ ರಾಸಾಯನಿಕ ಉತ್ಪತ್ತಿಯಾಗಿದೆ. ತೆರೆದ ಚರಂಡಿಯಲ್ಲಿ ಇಳಿದಿದ್ದ ಕಾರ್ಮಿಕರು ತಾಸುಗಟ್ಟಲೆ ಬಗ್ಗಿ ತ್ಯಾಜ್ಯ ಹೊರ ತೆಗೆಯುವ ಸಮಯದಲ್ಲಿ ವಿಷ ಗಾಳಿ ಸೇವಿಸಿ ಇಬ್ಬರೂ ಅಸ್ವಸ್ಥರಾಗಿದ್ದಾರೆ.
ಪಂಚಾಯಿತಿ ಪಿಡಿಒ ಹಾಗು ಸಿಬ್ಬಂದಿ ಚರಂಡಿ ಸ್ವಚ್ಛತಾ ಸಮಯದಲ್ಲಿ ಕೂಲಿಕಾರರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಕೈಗವಸು ಮತ್ತು ಮುಖ ಗವಸು ನೀಡದೆ ಏಕಾಏಕಿ ಚರಂಡಿಗೆ ಇಳಿಸಿದ್ದು, ಪಿಡಿಓ ಶಶಿಧರ್ ಪಾಟೀಲ್ ಅವರ ನಿರ್ಲಷ್ಯದ ಕಾರಣ ಇಬ್ಬರ ಸಾವಿಗೆ ಕಾರಣವಾಗಿದೆ. ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚುವ ಸಲುವಾಗಿ ಪ್ರಕರಣವನ್ನು ತಿರುಚುತ್ತಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡು:
ಘಟನಾ ಸ್ಥಳಕ್ಕೆ ತಾಪಂ ಇಓ ಚಂದ್ರಶೇಖರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಡಿಡಿ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ಅದಕ್ಕೆ ಜಪ್ಪಯ್ಯ ಎನ್ನದ ಗ್ರಾಮಸ್ಥರು ಹಾಗೂ ಸಂಬಂಧಿಕರು ಪಿಡಿಓ ಶಶಿಧರ್ ಪಾಟೀಲ್ ಅಮಾನತು ಮಾಡಿ ಮೃತ ಕುಟುಂಬಗಳ ಸದಸ್ಯರಿಗೆ ಸರಕಾರ ಖಾಯಂ ಉದ್ಯೋಗ ಕಲ್ಪಿಸಬೇಕು ಮತ್ತು ತಲಾ 10 ಲಕ್ಷ ರೂ ಪರಿಹಾರ ನೀಡಬೇಕು ಎಂದು ಬಿಗಿಪಟ್ಟು ಹಿಡಿದರು. ನಂತರ ಇಓ ಚಂದ್ರಶೇಖರ್ ಮಾತನಾಡಿ, ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಮೃತಮಟ್ಟ ಕುಟುಂಬದ ಸದಸ್ಯರಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದೇವೆ ಎಂದು ಹೇಳಿದರು. ನಂತರ ಮೃತ ದೇಹಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪಿಡಿಓ ವಿರುದ್ಧ ಶಿಸ್ತು ಕ್ರಮಕ್ಕೆ ವರದಿ ರವಾನೆ:
ಎರಡು ಜೀವಗಳನ್ನು ಬಲಿಗೆ ಕಾರಣವಾದ ಪಿಡಿಓ ಶಶಿಧರ್ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಘಟನೆಯ ವರದಿಯನ್ನು ಜಿಪಂ ಸಿಇಓ ಡಾ.ಚನ್ನಪ್ಪ ಅವರಿಗೆ ಕಳುಹಿಸಲಾಗಿದೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಸಿಇಓ ಕ್ರಮ ಕೈಗೊಳ್ಳುತ್ತಾರೆ.
-ವೈ.ಎಚ್.ಚಂದ್ರಶೇಖರ್, ಇಒ,ತಾಪಂ, ಜಗಳೂರು.