Suddivijaya|Kannada News|06-04-2023
ಸುದ್ದಿವಿಜಯ,ಜಗಳೂರು:ಭೂಮಿಯ ಮೇಲಿರುವ ಸಕಲ ಜೀವ ರಾಶಿಗಳಲ್ಲಿ ಯಾವುದೇ ಕಷ್ಟದಲ್ಲಿರಲ್ಲಿ ಅದನ್ನು ರಕ್ಷಣೆ ಮಾಡಿ ಜೀವ ಉಳಿಸುವುದೇ ಪುಣ್ಯದ ಕೆಲಸವಾಗಿದೆ. ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ಜಗಳೂರು ತಾಲೂಕಿನ ಸಂತೇಮುದ್ದಾಪುರ ಗ್ರಾಮದ ಬಳಿ ಗುರುವಾರ ಹನುಮ ಸೇವಾ ಸಮಿತಿ ವತಿಯಿಂದ ಪ್ರಥಮ ವರ್ಷದ ಹನುಮ ಜಯಂತಿ ಮಹೋತ್ಸವ ಹಿನ್ನೆಲೆ ಹಮ್ಮಿಕೊಂಡಿದ್ದ ಧರ್ಮ ಜನ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಪ ಕರ್ಮಗಳನ್ನು ಮಾಡದೇ ಕೈಲಾದಷ್ಟು ಪುಣ್ಯದ ಕರ್ಮಗಳನ್ನೆ ಮಾಡಬೇಕು. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ದಿ ಪಡೆಯಲು ಪುಣ್ಯದಿಂದ ಮಾತ್ರ ಸಾಧ್ಯ. ಪರರಿಗೆ ಅಪಕಾರವನ್ನು ಮಾಡದೇ ಉಪಕಾರ ಗಣವನ್ನು ಮೈಗೂಡಿಸಿಕೊಳ್ಳಬೇಕು. ವಿಷ ಕಾರುವುದು ಚೇಳಿನ ಗುಣ, ಹಾಗಂತ ಅದನ್ನು ಸಾಯಲು ಬಿಡದೇ ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ಭೂಮಿಯಲ್ಲಿ ಯಾವುದು ಶಾಶ್ವತವಲ್ಲಾ ಎಲ್ಲವು ನಶ್ವರ, ಆದರೆ ಇರುವಷ್ಟು ಕಾಲದಲ್ಲಿ ಮಾಡುವ ಒಳ್ಳೆಯ ಕೆಲಸಗಳು ಇತಿಹಾಸವಾಗಿ ಉಳಿಯುತ್ತವೆ. ಈ ದೇಶದಲ್ಲಿ ಅನೇಕರು ಇತಿಹಾಸದ ಪುಟದಲ್ಲಿ ಸೇರಿ ನೂರಾರು ವರ್ಷಗಳಾದರೂ ಅವರ ನೆನಪು ಇನ್ನು ಜೀವಂತವಾಗಿ ಉಳಿದಿವೆ ಅದು ಮನುಷ್ಯನಿಗೆ ಸಾರ್ಥಕವೆನಿಸುತ್ತದೆ ಎಂದರು.
ಯಾರಿಗೂ ಅನ್ಯಾಯ ಮಾಡಬೇಡ, ಅನ್ಯಾಯ ಸಹಿಸಬೇಡ, ಇವುಗಳನ್ನು ನೋಡಿ ತಡೆಯುವ ಶಕ್ತಿ ನಿನಗಿಲ್ಲದಿದ್ದರೆ ಅಲ್ಲಿ ನಿಲ್ಲಬೇಡ, ಅಂತಹ ಧರ್ಮ ಕಾರ್ಯವನ್ನು ಮಾಡಬೇಕು. ಪಂಚಋಣಗಳಾದ ಮಾತೃ, ಪಿತೃ, ದೈವ , ಗುರು, ದೇಶ ಋಣ ಇವುಗಳನ್ನು ತೀರಿಸುವ ಕರ್ತವ್ಯ ಹುಟ್ಟಿದ ಪ್ರತಿ ಮನುಷ್ಯನಿಗಿದೆ ಎಂದರು.
ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮೀ ಪ್ರಕಾಶನಂದಜೀ ಮಹರಾಜ್ ಇಂದಿನ ಯುವ ಪೀಳಿಗೆ ದೇಹ ಪ್ರೇಮಕ್ಕಿಂತ ದೇವ ಪ್ರೇಮ, ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಯುವಕರಿಗೆ ಆದರ್ಶ ಆಂಜನೇಯ ಸ್ವಾಮಿ, ದೇಹ, ಬುದ್ದಿ ಬಲವನ್ನು ಲೋಕ ಬಲಿಷ್ಠವಾಗುತ್ತದೆ. ಜೀವನದಲ್ಲಿ ದುಃಖ, ದೌರ್ಬಲ್ಯವನ್ನು ಹೋಗಲಾಡಿಸಲು ಆಂಜನೇಯ ಆರಾಧನೆಯಿಂದ ಮಾತ್ರ ಸಾಧ್ಯ ಎಂದರು.
ಭಾರತಕ್ಕೆ ಬೆನ್ನು ಮೂಳೆ ಧರ್ಮ ಅದು ನಶಿಸಿದರೆ ದೇಶ ವಿನಾಶವಾಗುತ್ತದೆ. ಸಿಂಧೂ, ಹಿಂದೂ ನಾಗರೀಕತೆ ಬದುಕಿರುವುದು ಧರ್ಮದಿಂದಾಗಿದೆ. ಬ್ರಿಟೀಷರು ಶಿಕ್ಷಣದ ಮೂಲಕ ಭಾರತ ಸಂಸ್ಕೃತಿಯನ್ನು ನಾಶ ಮಾಡಿದೆ. ಶಿಕ್ಷಣ ಇಲ್ಲದಿದ್ದರೆ ದೇಶ ಇನ್ನು ಬಲಿಷ್ಠವಾಗಿ ಬೆಳೆಯುತ್ತಿತ್ತು ಎಂದರು.
ಹಿರೇ ಹಡಗಲಿ ಹಾಲಸ್ವಾಮಿಜಿ ಮಹಾಸಂಸ್ಥಾನ ಮಠದ ಅಭಿನಯ ಹಾಲಶ್ರೀ ಮಹಾಸ್ವಾಮಿ ಮಾತನಾಡಿ, ಕೇಸರಿ ಬಣ್ಣ ಕಿಚ್ಚು. ಜ್ವಾಲೆ, ಬೆಂಕಿ, ಸ್ಪೋಟದಲ್ಲಿ ಹುಟ್ಟಿ ಬಂದಿದೆ. ಜಗತ್ತಿನಲ್ಲಿ ಹಲವು ಧರ್ಮಗಳಿರಬಹುವುದು, ಹಸಿದವರಿಗೆ ಅನ್ನ ಹಾಕಿದ್ದು, ಬಾಯಾರಿದವರಿಗೆ ನೀರು ಕೊಟ್ಟಿದ್ದ ಸನಾತನ ಹಿಂದೂ ಧರ್ಮವಾಗಿದೆ. ಇಂತಹ ಶ್ರೇಷ್ಠ ಧರ್ಮದಲ್ಲಿ ಹುಟ್ಟಿದ ನಾವೆಲ್ಲರು ಭಾರತ ಮಾತೇಯ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ. ಜಗತ್ತಿಗೆ ಪರಂಪರೆ, ಶಿಕ್ಷಣ ಕೊಟ್ಟವರು, ಸಮಾಜವನ್ನು ತಿದ್ದಿದವರು ಹಿಂದುಗಳು ಎಂದರು.
ಚಿತ್ರದುರ್ಗ ಕೃಷ್ಣ ಯಾದವ ಮಹಾಸಂಸ್ಥಾನ ಪೀಠದ ಕೃಷ್ಣ ಯಾದವನಂದ ಮಹಾಸ್ವಾಮಿ, ಕಲಬುರಗಿ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಮಹಾಸ್ವಾಮಿ, ಚಿತ್ರದುರ್ಗ ಸೇವಾಲಾಲ್ ಮಹಾಪೀಠದ ಸೇವಲಾಲ್ ಮಹಾಸ್ವಾಮಿ, ಮಾತನಾಡಿದರು.
ಗಮನ ಸೆಳೆದ ಮಾಲಾಧಾರಿಗಳು:
ಪ್ರಥಮ ವರ್ಷದ ಬೇಡಿ ಹನುಮ ಜಯಂತಿಯಲ್ಲಿ ಸುಮಾರು 1500 ಯುವಕರು, ಮಧ್ಯ ವಯಸ್ಕರು ಮಾಲಾಧಾರಣೆ ಮಾಡಿದ್ದು ಗಮನ ಸೆಳೆಯಿತು. ಮಾಲಾಧಾರಿಗಳ ಜತೆಗೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದು ಸಾವಿರಾರು ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆಯಿಂದ ಮಾಲಾಧಾರಿಗಳಿಂದ ಹೋಮ, ಹವನಗಳು ಸೇರಿದಂತ ಪೂಜಾ ಕೈಂಕರ್ಯಗಳು ನೆರವೇರಿದವು.
ಕುಂಬ ಮೇಳ:
ಸಂತೇಮುದ್ದಾಪುರ ರಸ್ತೆಯಿಂದ ಆಗಮಿಸಿದ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿAಗ ಶಿವಾಚಾರ್ಯ ಶ್ರೀ, ಚಿತ್ರದುರ್ಗ ಕೃಷ್ಣ ಯಾದವ ಮಹಾಸಂಸ್ಥಾನ ಪೀಠದ ಕೃಷ್ಣ ಯಾದವನಂದ ಮಹಾಸ್ವಾಮಿ, ಹಿರೇ ಹಡಗಲಿ ಹಾಲಸ್ವಾಮಿಜಿ ಮಹಾಸಂಸ್ಥಾನ ಮಠದ ಅಭಿನಯ ಹಾಲಶ್ರೀ ಮಹಾಸ್ವಾಮಿಗಳನ್ನು ಮಹಿಳೆಯರು ಕುಂಬ ಮೇಳದೊಂದಿಗೆ ಸ್ವಾಗತಿಸಿಕೊಂಡರು. ಕುಂಬ ಹೊತ್ತು ಸಾಗಿದ ಮಹಿಳೆಯರಿಗೆ ಮೆರವಣಿಗೆ ಮೆರಗು ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ವಿ ರಾಮಚಂದ್ರ, ಮಾಜಿ ಶಾಸಕ ಎಚ್.ಪಿ ರಾಜೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಎಚ್.ಸಿ ಮಹೇಶ್, ದೇವಸ್ಥಾನಗಳ ಸಂವರ್ಧನಾ ಸಮಿತಿ ಪ್ರಾಂತ ಮುಖಂಡ ಮನೋಹರ್ ಮಠದ್, ವಿಎಸ್ಎಸ್ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು, ಮಾಜಿ ಜಿ.ಪಂ ಸದಸ್ಯ ಎಸ್.ಕೆ ಮಂಜುನಾಥ್, ಸಮಿತಿಯ ಮುಖಂಡರಾದ ಶಿವಕುಮಾರ್ ಸ್ವಾಮಿ, ಕೃಷ್ಣಮೂರ್ತಿ ಸೇರಿದಂತೆ ಮತ್ತಿತರಿದ್ದರು.