ಸುದ್ದಿವಿಜಯ, ಜಗಳೂರು: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ ರಾಮಚಂದ್ರ ಸೋಮವಾರ ರೋಡ್ ಶೋ ಮೂಲಕ ಪಟ್ಟಣದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಎಸ್. ರವಿ ಅವರಿಗೆ ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ.
ಬೆಳಿಗ್ಗೆ 11.30ಕ್ಕೆ ಸರಿಯಾಗಿ ಒಂದು ಸೆಟ್ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ನಂತರ ಪಟ್ಟಣದ ಹೊರಕೆರೆಯ ಈಶ್ವರ ದೇವಸ್ಥಾನ ಮತ್ತು ಮಾರಮ್ಮ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ರೋಡ್ ಶೋಗೆ ಚಾಲನೆ ನೀಡಲಾಯಿತು. ಪುರುಷ-ಮಹಿಳೆ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಹೊರಕೆರೆ, ಹಳೆ ಕೋರ್ಟ್ ರಸ್ತೆ, ನೆಹರು ರಸ್ತೆ, ಹಳೇ ಮಹಾತ್ಮಗಾಂಧಿ ವೃತ್ತ, ಡಾ.ರಾಜ್ಕುಮಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿದರು.
ಆಗ ಮಧ್ಯಾಹ್ನ 2.30 ಸಮುಯವಾಗಿತ್ತು ಮೂರು ನಿಮಿಷ ಆಗುವವರೆಗು ಕಾದು ನಂತ 2.38ಕ್ಕೆ ಸರಿಯಾಗಿ ಚುನಾವಣಾಧಿಕಾರಿಗಳ ಬಳಿ ತೆರಳಿ ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ನನ್ನ ಕ್ಷೇತ್ರದ ಮತದಾರರು ಭತ್ತ ಬೆಳೆದು ದಾವಣಗೆರೆ ಮಾರುಕಟ್ಟೆಯಿಂದ ಮಾರಾಟ ಮಾಡಿ ಕೈಯಲ್ಲಿ ಹಣ ತರುವಂತಾಗಬೇಕು ಎನ್ನುವುದು ಆಸೆಯಾಗಿದೆ.
ಅದರಂತೆ ಎರಡ್ಮೂರು ವರ್ಷಗಳಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆಯಿಂದ 46 ಸಾವಿರ ಎಕರೆ ಪ್ರದೇಶಕ್ಕೆ ತುಂತುರು ನೀರಾವರಿ, 165 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂರು ಮಹತ್ತರ ಯೋಜನೆಗಳ ಮೂಲಕ ನೀರಾವರಿ ಪ್ರದೇಶವನ್ನಾಗಿ ಮಾಡಲಾಗುವುದು ಎಂದರು.
ಕಳೆದ ಐದು ವರ್ಷಗಳಲ್ಲಿ ಎಲ್ಲಾ ಸಮುದಾಯಗಳಲ್ಲೂ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಂಡು ಬರಲಾಗಿದೆ. ಪೊಲೀಸ್ ಠಾಣೆಯಲ್ಲಿ ಯಾರ ವಿರುದ್ದ ಪ್ರಕರಣಗಳಾದಂತೆ ಕಾಪಾಡಿಕೊಂಡು ಅಭಿವೃದ್ದಿಗೆ ಒತ್ತು ನೀಡಲಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದ ಕಾರ್ಯಗಳು ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ಪ್ರಧಾನ ಮಂತ್ರ ನರೇಂದ್ರ ಮೋದಿ ರಾಷ್ಟ್ರ ನಾಯಕರಲ್ಲದೇ ವಿಶ್ವಮಟ್ಟದಲ್ಲಿ ಜನ ಮನ್ನಣೆ ಪಡೆದಿದ್ದಾರೆ. ಅಂತಹ ನಾಯಕರಿರುವ ಬಿಜೆಪಿಯ ಪಕ್ಷಕ್ಕೆ ಸೋಲಿಲ್ಲ. ನಾನು ಗೆದ್ದು ಸರ್ಕಾರಕ್ಕೆ ಕೈ ಬಲಪಡಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಸಿಲಿಗೆ ಬಸವಳಿದ ಕಾರ್ಯಕರ್ತರು
ಬಿಜೆಪಿ ರೋಡ್ಶೋನಲ್ಲಿ ಸಾವಿರಾರು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.
ಶಾಸಕ ಎಸ್.ವಿ ರಾಮಚಂದ್ರ ಮತ್ತು ಬೆಂಬಲಿಗರು ತೆರದ ವಾಹನದಲ್ಲಿ ಮತ ಯಾಚಿಸಿದರು. ಆದರೆ ಏರುತ್ತಿದ್ದ ಬಿಸಿಲಿ ತಾಪಕ್ಕೆ ಎಲ್ಲರು ಸುಸ್ತಾಗಿ ಹೋದರು.
ದಾರಿಯುದ್ದಕ್ಕೂ ಸಾಗುತ್ತಿದ್ದ ರೋಡ್ ಶೋನಲ್ಲಿ ಕೆಲವರು ನೆರಳಿನ ಮರೆ ಹೋದರೆ ಇನ್ನು ಕೆಲವರು ಅಲ್ಲಲ್ಲೇ ಕುಳಿತು ವಿಶ್ರಾಂತಿ ಪಡೆದರು. ಇನ್ನು ಶಾಸಕ ಎಸ್.ವಿ ರಾಮಚಂದ್ರ ತಾಲೂಕು ಕಚೇರಿಗೆ ತೆರಳುವಷ್ಟರಲ್ಲಿ ಸಾಕು ಸಾಕಾಗಿ ಹೋದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಡಾ. ರವಿಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಕಲ್ಲೇಶಪ್ಪ, ಮಾಜಿ.ಜಿ.ಪಂ ಸದಸ್ಯ ಎಚ್. ನಾಗರಾಜ್, ಶಿವಕುಮಾರ್ಸ್ವಾಮಿ, ಕೃಷ್ಣಮೂರ್ತಿ, ಬಿಸ್ತುವಳ್ಳಿ ಬಾಬು , ವಕೀಲರಾದ ಡಿ.ವಿ.ನಾಗಪ್ಪ ಮತ್ತಿತರರು ಇದ್ದರು.