ಸುದ್ದಿವಿಜಯ,ಜಗಳೂರು: ತಾಲೂಕಿನಲ್ಲಿ ಪ್ರಸ್ತುತ ವರ್ಷ ಅಷ್ಟೋ ಇಷ್ಟೋ ಬಿದ್ದ ತುಂತುರು ಮಳೆಗೆ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೀಜಗಳಿಗೆ ಹಂದಿಗಳ ಕಾಟ ಶುರುವಾಗಿದ್ದು ರೈತರು ಹಂದಿಗಳ ಕಾಟಕ್ಕೆ ರೋಸಿ ಹೋಗಿದ್ದಾರೆ.
ದುಭಾರಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ಹೊಲಗಳಲ್ಲಿ ರಾತ್ರೋ ರಾತ್ರಿ ದಾಂಗುಡಿಯಿಡುವ ಹಂದಿಗಳು ಸಾಲು ಹಿಡಿದು ಮೆಕ್ಕೆಜೋಳದ ಬೀಜಗಳನ್ನು ಎಕ್ಕಿ ತಿಂದು ಹೋಗುತ್ತಿವೆ.
ತಾಲೂಕಿನ ಬಿದರಕೆರೆ, ಕಟ್ಟಿಗೆಹಳ್ಳಿ, ನಿಬಗೂರು, ಗೊಲ್ಲರಹಟ್ಟಿ, ಮೆದಗಿನಕೆರೆ, ರಸ್ತೆಮಾಕುಂಟೆ, ಲಿಂಗಣ್ಣನಹಳ್ಳಿ, ರಸ್ತೆಮಾಚಿಕೆರೆ, ತಾರೆಹಳ್ಳಿ, ಗೋಡೆ, ಮಹಾರಾಜನಹಟ್ಟಿ ಸೇರಿದಂತೆ ಬಿಳಿಚೋಡು, ಕಸಬಾ, ಹೊಸಕೆರೆ, ಸೊಕ್ಕೆ ಹೋಬಳಿಗಳಲ್ಲಿ ಈಗಾಗಲೇ 17,500 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.
ತಾಲೂಕಿನಾದ್ಯಂತ ಪ್ರತಿ ವರ್ಷ 57 ಸಾವಿರ ಹೆಕ್ಟೇರ್ ಬಿತ್ತನೆ ಆಗುತ್ತಿದ್ದು ಈ ಬಾಕಿ ಜುಲೈ ತಿಂಗಳು ಬಂದರು ಇನ್ನು 34 ಸಾವಿರ ಹೆಕ್ಟೇರ್ ಬಿತ್ತನೆ ಬಾಕಿ ಇದೆ. ಅದರ ಮಧ್ಯೆ ಬಿತ್ತಿದ ಜಿಮೀನುಗಳಿಗೆ ಹಂದಿಗಳು ರಾತ್ರೋ ರಾತ್ರಿ ನುಗ್ಗುತ್ತಿದ್ದು ರೈತರು ರಾತ್ರಿಯಲ್ಲಾ ನಿದ್ದೆಗಟ್ಟಿ ಹಂದಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಂದಿಗಳ ನಿಯಂತ್ರಣ ಹೇಗೆ?
ರೈತರು ತಮ್ಮ ಹೊಲಗಳಿಗೆ ನುಗ್ಗು ಹಂದಿಗಳನ್ನು ನಿಯಂತ್ರಣ ಮಾಡಲು ಅನೇಕ ಉಪಾಯಗಳಿವ. ಆದರೆ ಯಾವುದೇ ಕಾರಣಕ್ಕೂ ಹೊಲಗಳ ಸುತ್ತ ತಂತಿ ಹಾಕಿ ವಿದ್ಯುತ್ ಪ್ರವಹಿಸುವ ಯೋಚನೆ ಮಾಡಬಾರದು ಇದರಿಂದ ಮಾನವನ ಪ್ರಾಣಕ್ಕೆ ಅಪಾಯ ಬರಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಮನವಿ ಮಾಡಿದ್ದಾರೆ.
ಹಂದಿಗಳು ಹೊಳಗಳಿಗೆ ನಗ್ಗದಂತೆ ಈಗ ನಾಯಿ ಬೊಗಳುವ ಸೈರನ್ ಮಷೀನ್‍ಗಳು ಮಾರುಕಟ್ಟೆಯಲ್ಲಿದ್ದು ಅವುಗಳನ್ನು ಖರೀದಿಸಿ ಮರಗಳಿಗೆ ಕಟ್ಟಿದರೆ ನಾಯಿಗಳು ಬೊಗಳುವ ಶಬ್ದಕ್ಕೆ ಹಂದಿಗಳು ಬರುವುದಿಲ್ಲ. ಜೊತೆಗೆ ತಂತಿಬಿಗಿದು, ಬಿಳಿ ಬಣ್ಣದ ಬಟ್ಟೆ ಅಥವಾ ಬ್ಯಾಗಡಿ ಕಟ್ಟಿದರೆ ಅವುಗಳ ಶಬ್ದಗಳಿಗೆ ಹಂದಿಗಳು ಬರುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ತಾಲೂಕಿನಲ್ಲಿ ಪ್ರಸ್ತುತ ವರ್ಷ ಮುಂಗಾರು ಹಂಗಾಮಿನಲ್ಲಿ 800 ಹೆ.ತೊಗರಿ, 650 ಹೆ.ಹತ್ತಿ, 50 ಹೆ. ಊಟದ ಜೋಳ, 100 ಹೆ.ಶೇಂಗಾ, 17,500 ಹೆ.ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ರಾಗಿ ಮತ್ತು ಶೇಂಗಾ ಬಿತ್ತನೆಗೆ ರೈತರು ಮುಂದಾಗಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.