ಸುದ್ದಿವಿಜಯ, ಜಗಳೂರು:(ವಿಶೇಷ ವರದಿ), ಕನ್ನಡದ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಲಿ ಎಂದು ಪಟ್ಟಣದ ಮರೇನಹಳ್ಳಿ ರಸ್ತೆಯ ಎನ್ಜಿಓ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಸಮೀಪ ನಿರ್ಮಾಣವಾಗಿರುವ ಸಾಂಸ್ಕೃತಿಕ ಭವನ ಗುತ್ತಿಗೆದಾರನ ಸಿಮೆಂಟ್ ಗೋದಾಮಾಗಿ ಪರಿವರ್ತನೆಯಾಗಿದೆ.
2010ರಲ್ಲಿ ನಿರ್ಮಾಣವಾಗಿ 2011ರಲ್ಲಿ ಉದ್ಘಾಟನೆಯಾಗಿದ್ದ ಸಾಂಸ್ಕೃತಿಕ ಭವನದಲ್ಲಿ ಇಲ್ಲಿಯವರೆಗೂ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ನಡೆಯದೇ ಗುತ್ತಿಗೆದಾರ ಜಿಲಾನಿ ಎಂಬುವರ ಗೋದಾಮಾಗಿದೆ.
2008ರಲ್ಲಿ ಭೂಮಿಪೂಜೆ ನೆರವೇರಿಸಿ 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. 2011ರಲ್ಲಿ ಶಾಸಕರಾಗಿದ್ದ ಎಸ್.ವಿ.ರಾಮಚಂದ್ರ, ಆಗಿನ ಕಸಾಪ ಅಧ್ಯಕ್ಷರಾಗಿದ್ದ ತಿಮ್ಮರಾಜು ಅವರ ಅಧ್ಯಕ್ಷತೆಯಲ್ಲಿ ಭವನವನ್ನು ಉದ್ಘಾಟನೆ ಮಾಡಿದ್ದರು.
ಆದರೆ ಅಲ್ಲಿಂದ ಇಲ್ಲಿಯವರೆಗೂ ಅಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗದೇ ಗುತ್ತಿಗೆದಾರ ಜಿಲಾನಿಗೆ ಸೇರಿದ ನೂರಾರು ಸೀಮೆಂಟ್ ಚೀಲ, ಪೈಪ್, ಕಬ್ಬಿಣ ಸೇರಿದಂತೆ ಕಟ್ಟಡಗಳಿಗೆ ಬೇಕಾದ ಸಾಮಾಗ್ರಿಗಳನ್ನು ಇಲ್ಲಿ ದಾಸ್ತಾನು ಮಾಡಿಲಾಗಿದೆ.
ಕಿತ್ತುಹೋದ ರಸ್ತೆ:
ಸಿಮೆಂಟ್ ಲಾರಿಗಳ ಓಡಾಟದಿಂದ ಲಕ್ಷಾಂತರ ರೂ ಖರ್ಚುಮಾಡಿ ನಿರ್ಮಿಸಲಾಗಿದ್ದ ಡಾಂಬರ್ ರಸ್ತೆ ಕಿತ್ತುಹೋಗಿದೆ. ಈಗ ನಿತ್ಯ ಶಾಲೆಗೆ ಓಡಾಡುತ್ತಿರುವ ವಿದ್ಯಾರ್ಥಿಗಳು ಸೈಕಲ್ ತೆಗೆದುಕೊಂಡು ಹೋಗಲಾರದಷ್ಟು ಹಾಳಾಗಿದ್ದು ಗುತ್ತಿಗೆದಾರನ ವಿರುದ್ದ ವಿದ್ಯಾರ್ಥಿಗಳು, ಶಿಕ್ಷಕರು ಕಿಡಿಕಾರಿದ್ದಾರೆ.
ಸಾಂಸ್ಕೃತಿಕ ಭವನ ನಿರ್ಮಾಣವಾಗಿ ಅನೇಕ ವರ್ಷಗಳಾದರೂ ನಮಗೆ ಸುಪರ್ಧಿಗೆ ಕೊಟ್ಟಿಲ್ಲ. ಪಪಂ ಆಡಳಿತಕ್ಕೆ ಪತ್ರಬರೆದು ಗಮನಕ್ಕೆ ತರಲಾಗಿದೆ. ಅಲ್ಲಿ ಮೂಲಭೂತ ಸೌಲಭ್ಯಗಲಿಲ್ಲ. ಸಾಂಸ್ಕೃತಿಕ ಚಟುವಟಿಕೆಗನ್ನು ನಡೆಸಲು ದೂರವಾಗುತ್ತದೆ ಎನ್ನುವ ಕಾರಣಕ್ಕೆ ನಾವು ಆ ಭವನದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಿಲ್ಲ.
-ಕೆ.ಸುಜಾತಮ್ಮ,ಕಸಾಪ ತಾಲೂಕು ಅಧ್ಯಕ್ಷರು.