https://suddivijaya.com
ಸುದ್ದಿವಿಜಯ, ಜಗಳೂರು: ಕೃಷಿ ಪಂಪ್‍ಸೆಟ್‍ಗಳಿಗೆ ಹಗಲಿನಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಸೋಮವಾರ ತಾಲೂಕಿನ ಹುಚ್ಚವ್ವನಹಳ್ಳಿ, ಅಣಬೂರು, ಹಿರೇಮಲ್ಲನಹೊಳೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಬೆಸ್ಕಾಂ ಎಇಇ ಗಿರೀಶ್‍ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನಾದ್ಯಂತ ಎಲ್ಲಾ ಜಮೀನುಗಳಲ್ಲಿ ರೈತರು ಬಿತ್ತನೆ ಮಾಡಿ ಪೈರು ಬೆಳೆಯುತ್ತಿವೆ. ಆದರೆ ಕಳೆದ ಎರಡು ವಾರಗಳಿಂದಲೂ ಮಳೆ ಬೀಳದೇ ಬೆಳೆಗಳು ಒಣಗಲು ಆರಂಭಿಸಿವೆ.
ಇನ್ನೇರಡು ಮೂರು ದಿನಗಳಲ್ಲಿ ಮಳೆ ಬಾರದಿದ್ದರೇ ಈ ವರ್ಷದ ಬೆಳೆ ಕೈಗೆ ಸಿಗುವುದಿಲ್ಲ. ಹಾಗಾಗಿ ನೀರಾವರಿ ಜಮೀನುಗಳಿರುವ ರೈತರು ಬೆಳೆಗಳಿಗೆ ನೀರಾಯಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕೃಷಿ ಪಂಪ್‍ಸೆಟ್‍ಗೆಳಿಗೆ ರಾತ್ರಿವೇಳೆ ವಿದ್ಯುತ್ ನೀಡುವುದನ್ನು ನಿಲ್ಲಿಸಿ ಹಗಲಿನಲ್ಲಿ ಕೊಡುವಂತೆ ಒತ್ತಾಯಿಸಿದರು.
ರಾತ್ರಿ ವೇಳೆ ಜಮೀನುಗಳಲ್ಲಿ ನೀರಾಯಿಸಲು ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಕರಡಿ, ಹಂದಿ, ಚಿರತೆ ಮತ್ತು ವಷ ಜಂತುಗಳಿಗೆ ರೈತರು ಹೋಗಲು ಸಾಧ್ಯವಾಗುತ್ತಿಲ್ಲ.
ರಾತ್ರಿ ವೇಳೆ ನೀರು ಕಟ್ಟುವಾಗಿ ಕರಡಿಗಳು ದಾಳಿ ನಡೆಸಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಗಾಯಗೊಂಡು ಊನರಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಹಗಲಿನಲ್ಲಿ ವಿದ್ಯುತ್ ನೀಡಿ ರೈತರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹುಚ್ಚವ್ವನಹಳ್ಳಿ ರೈತ ಮುಖಂಡರಾದ ಎಸ್.ತಿಪ್ಪೇಸ್ವಾಮಿ, ಟಿ.ಮಂಜುನಾಥ್, ದಲಿತ ಯುವ ಮುಖಂಡರಾದ ಬಿ.ನಾಗರಾಜ್, ದಸಂಸ ತಾಲೂಕು ಸಂಚಾಲಕ ಬಿ.ಸತೀಶ್ ಮಲೆಮಾಚಿಕೆರೆ, ಜಗಜೀವನ್ ರಾಮ್ ಆರ್.ಎಲ್, ದವಿಪ ತಾಲೂಕು ಸಂಚಾಲಕರಾದ ಶಿವಕುಮಾರ್ ಎಸ್, ರೈತ ಮುಖಂಡರಾದ ಜಗದೀಶ್, ದಾದಾಪೀರ್ ಸೇರಿದಂತೆ ಮತ್ತಿತರಿದ್ದರು.