ಸುದ್ದಿವಿಜಯ, ಜಗಳೂರು: ಪ್ರೀತ್ಸೆ… ಪ್ರೀತ್ಸೆ … ಅಂತ ಪ್ರಾಣ ತಿಂದ ಹುಚ್ಚು ಪ್ರೇಮಿಯ ಕಾಟಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಅರ್ಚನಾ ಅಲಿಯಾಸ್ ಕರಿಬಸಮ್ಮ (18) ಸಾವು ಬದುಕಿನ ಹೋರಾಟದಲ್ಲಿ ಕೊನೆಗೂ ಮೃತಪಟ್ಟಿರುವ ಧಾರುಣ ಘಟನೆ ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿ ಅರ್ಚನಾಳನ್ನು ಅದೇ ಗ್ರಾಮದ ಮಧು ಅಲಿಯಾಸ್ ಮಧುಕುಮಾರ್ ಕಳೆದ ಒಂದೂವರೆ ವರ್ಷಗಳಿಂದ ಪ್ರೀತಿಸು. ನನ್ನನ್ನು ವಿವಾಹವಾಗು ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.
ನೀನು ಪ್ರೀತಿಸದೇ ಇದ್ದರೆ ನಿನಗೆ ಆಸಿಡ್ ಸುರಿದು ಕೊಲೆ ಮಾಡುತ್ತೇನೆ ಎಂದು ಬೆದರಕೆ ಕೂಡ ಹಾಕಿದ್ದ ಎನ್ನಲಾಗಿದೆ. ಮಧುಕುಮಾರನಿಗೆ ಮೃತ ಅರ್ಚನಾ ಚಿಕ್ಕಪ್ಪ ನಾಗೇಂದ್ರಸ್ವಾಮಿ ಎನ್ನುವ ವ್ಯಕ್ತಿ ಖುಮ್ಮಕ್ಕು ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿದು ಬಂದಿದೆ.
ಪ್ರೀತಿಸದೇ ಇದ್ದರೆ ನಿನ್ನನ್ನು ಆಸಿಡ್ ಇಲ್ಲವೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲುವ ಬೆದರಿಕೆ ಹಾಕಿದ್ದರಿಂದ ಮಧುಕುಮಾರನ ಹುಚ್ಚಾಟಕ್ಕೆ ಬೇಸತ್ತು ಮಾನಸೀಕ ಖಿನ್ನತೆಗೆ ಒಳಗಾಗಿ ಯುವತಿ ಅರ್ಚನಾ ಆ.29 ರಂದು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ತಕ್ಷಣ ಸಂಬಂಧಿಕರು ಆಕೆಯನ್ನು ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರ್ಚನಾ ಸೆ.3 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣ ಸಂಬಂಧ ಮೃತ ಅರ್ಚನಾ ಸಾವಿಗೆ ಕಾರಣವಾದ ಆರೋಪಿಗಳಾದ ಮಧುಕುಮಾರ್ ಮತ್ತು ನಾಗೇಂದ್ರಸ್ವಾಮಿ ವಿರುದ್ಧ ಮೃತ ಅರ್ಚನಾ ಚಿಕ್ಕಪ್ಪ ರಂಗಪ್ಪ ಎನ್ನುವವರು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಎಫ್ಐಆರ್ ದಾಖಲಾಗಿದೆ.
ಆರೋಪಿಗಳನ್ನು ಬಂಧಿಸಿ ಜಗಳೂರು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.